ನೌಕರರ ವೇತನ, ಪಿಂಚಣಿ ಶೇ.58.50 ಹೆಚ್ಚಳ: ಸಿಎಂ ಮಾಹಿತಿ

| Published : Jul 17 2024, 12:55 AM IST

ನೌಕರರ ವೇತನ, ಪಿಂಚಣಿ ಶೇ.58.50 ಹೆಚ್ಚಳ: ಸಿಎಂ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಆ.1ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ. 58.50ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಆ.1ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ. 58.50ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸರ್ಕಾರಿ ನೌಕರರ ವೇತನ, ಪಿಂಚಣಿ ಹೆಚ್ಚಳ ಕುರಿತಂತೆ ವಿಧಾನಸಭೆ ಕಲಾಪದಲ್ಲಿ ತಮ್ಮ ಹೇಳಿಕೆ ದಾಖಲಿಸಿದ ಸಿದ್ದರಾಮಯ್ಯ, ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆ ಬೇಡಿಕೆಗೆ ಸಂಬಂಧಿಸಿದಂತೆ 2022ರ ನ. 19ರಂದು ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ಕಳೆದ ಮಾ.24ರಂದು ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು. ಆ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, 2022ರ ಜು.1ರಿಂದ ಪೂರ್ವಾನ್ವಯವಾಗುವಂತೆ ಆ.1ರಿಂದ ಜಾರಿಗೊಳಿಸಲಾಗುತ್ತಿದೆ ಎಂದರು.7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿಭತ್ಯೆ ಮತ್ತು ಶೇ.27.50ರಷ್ಟು ಫಿಟ್‌ಮೆಂಟ್‌ ಸೇರಿ ಒಟ್ಟು ಶೇ.58.50ರಷ್ಟು ವೇತನ ಮತ್ತು ಪಿಂಚಣಿ ಪರಿಷ್ಕರಿಸಲಾಗುವುದು. ಈ ಕ್ರಮದಿಂದ 17 ಸಾವಿರ ರು. ಇರುವ ಮೂಲವೇತನ 27 ಸಾವಿರಕ್ಕೆ ಹಾಗೂ ಗರಿಷ್ಠ 1.50 ಲಕ್ಷ ಇರುವ ವೇತನ 2.41 ಲಕ್ಷ ರು.ಗೆ ಹೆಚ್ಚಳವಾಗಲಿದೆ. ಹಾಗೆಯೇ ಕನಿಷ್ಠ ಪಿಂಚಣಿ 8,500 ರು.ನಿಂದ 13,500 ಹಾಗೂ ಗರಿಷ್ಠ ಪಿಂಚಣಿ 75,300 ರು.ನಿಂದ 1.20 ಲಕ್ಷ ರು.ಗೆ ಪರಿಷ್ಕರಣೆಗೊಳ್ಳಲಿದೆ. ಈ ಕ್ರಮದಿಂದಾಗಿ ರಾಜ್ಯ ಸರ್ಕಾರಕ್ಕೆ 20,208 ಕೋಟಿ ರು. ಹೆಚ್ಚುವರಿ ವೆಚ್ಚವಾಗಲಿದೆ ಎಂದರು.