ಸಾರಾಂಶ
ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಈಗ ಎಲ್ಲೆಡೆಯೂ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಮುಂಬೈ, ಬೆಳಗಾವಿ ಹೊರತುಪಡಿಸಿದರೆ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಆಚರಿಸುವ ಗಣೇಶೋತ್ಸವ ರಂಗು ಜೋರಾಗಿದೆ. ಯಾವುದೇ ಗಲ್ಲಿಗೆ ತೆರಳಿದರೆ ಸಾಕು ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದು, ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿರುವುದು ಭಾನುವಾರ ಕಂಡುಬಂದಿತು.
ಹು-ಧಾ ಮಹಾನಗರದಲ್ಲಿ ಈದ್ಗಾ ಮೈದಾನದಲ್ಲಿನ ಗಣೇಶ ಪ್ರತಿಷ್ಠಾಪನೆ ಸೇರಿದಂತೆ ಈ ಬಾರಿ 940ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿವಿಧೆಡೆ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶ ಮೂರ್ತಿಗಳು ವಿಶೇಷ, ವೈಶಿಷ್ಟ್ಯತೆಯೊಂದಿಗೆ ಭಕ್ತರ ಗಮನ ಸೆಳೆಯುತ್ತಿವೆ.ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ 24 ಅಡಿ ಎತ್ತರದಲ್ಲಿ ಮರಾಠಗಲ್ಲಿಯ ಹುಬ್ಬಳ್ಳಿ ಕಾ ಮಹಾರಾಜ, ದಾಜಿಬಾನಪೇಟೆಯಲ್ಲಿ ಪ್ರತಿಷ್ಠಾಪಿಸಲಾದ 23 ಅಡಿ ಎತ್ತರದ ಹುಬ್ಬಳ್ಳಿ ಕಾ ರಾಜಾ ಮತ್ತು ಹೊಸ ಮ್ಯಾದರ ಓಣಿಯಲ್ಲಿ ಶ್ರೀ ಸಪ್ತ ಸಾಮ್ರಾಟ ಯುವಕ ಮಂಡಳದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 23 ಅಡಿ ಎತ್ತರದ ಲಿಂಗು ಮತ್ತು ಗೋವುಧಾರಿಯೊಂದಿಗಿರುವ ಗಣೇಶ ಮೂರ್ತಿ ಪ್ರಮುಖ ಆಕರ್ಷಣೆಗೆ ಕಾರಣವಾಗಿವೆ. ಅಲ್ಲದೇ ಕಮರಿಪೇಟೆಯ ಜಗದಂಬಾ ವೃತ್ತದಲ್ಲಿ ಎಸ್‌ಎಸ್‌ಕೆ ಜಗದಂಬಾ ಮಿತ್ರ ಮಂಡಳಿ, ಶ್ರೀ ಗಣೇಶ ಉತ್ಸವ ಮಂಡಳಿಯಿಂದ 16.5 ಅಡಿ ಎತ್ತರದಲ್ಲಿ ಹನುಮಂತನ ಬಾಲದ ಮೇಲೆ ಆರೂಢನಾದ ಗಜರಾಜ ಅಲ್ಲದೇ ದುರ್ಗದ ಬೈಲ್, ಕೊಪ್ಪಿಕರ ರಸ್ತೆ, ಹೊಸೂರು, ಸ್ಟೇಷನ್ ರಸ್ತೆ, ವಿದ್ಯಾನಗರ, ಈಶ್ವರ ನಗರ, ತಾಜ್ ನಗರ, ಏಕತಾ ನಗರ, ಶಿಂಪಿಗಲ್ಲಿ, ಹಳೇ ಹುಬ್ಬಳ್ಳಿ, ಉಣಕಲ್ಲ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿ ಹಾಗೂ ಓಣಿಗಳಲ್ಲಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಅದ್ಧೂರಿ ಮೆರವಣಿಗೆ: ಬಹುತೇಕ ಎಲ್ಲ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಶನಿವಾರ ಮೂರ್ತಿ ಪ್ರತಿಷ್ಠಾಪನೆಯ ಪೂರ್ವದಲ್ಲಿ ನಗರದಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿದವು. ಹಲವು ಕಡೆಗಳಲ್ಲಿ ಪೌರಾಣಿಕ ದೃಶ್ಯಗಳ ರೂಪಕ, ಶಿರಸಿ ಮಾರಿಕಾಂಬೆ ಜೀವನ ಚರಿತ್ರೆ, ಶ್ರೀರಾಮ ಸೇತು ಸೇರಿದಂತೆ ವಿವಿಧ ದೃಶ್ಯಗಳನ್ನು ಸಾದರ ಪಡಿಸುವಂತೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿವೆ. ಬೆಳಗ್ಗೆಯಿಂದಲೇ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲಿಯೂ ಗಣೇಶ ಮೂರ್ತಿ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಾಣಲಿಲ್ಲ. ಸುರಿಯುತ್ತಿದ್ದ ಮಳೆಯಲ್ಲೂ ಹುಮ್ಮಸ್ಸಿನಿಂದ ವಿಘ್ನೇಶ್ವರನ ದರ್ಶನಕ್ಕೆ ಆಗಮಿಸುತ್ತಿರುವುದು ಹಲವು ಕಡೆಗಳಲ್ಲಿ ಕಂಡುಬಂದಿತು.ಡಿಜೆ ಸದ್ದು ಜೋರು: ಗಣೇಶನ ಪ್ರತಿಷ್ಠಾಪನೆಗೂ ಮುನ್ನ ಭಾನುವಾರ ನಗರದಾದ್ಯಂತ ಭರ್ಜರಿ ಮೆರವಣಿಗೆ ಕಂಡುಬಂದಿತು. ಡೊಳ್ಳು, ಚಾಂಜ್ ಮೇಳ ಸೇರಿದಂತೆ ವಿವಿಧ ಕಲಾ ಮೇಳಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದವು. ಹುಬ್ಬಳ್ಳಿ ಕಾ ರಾಜಾ ಸೇರಿದಂತೆ ವಿವಿಧ ಬೃಹತ್ ಗಾತ್ರದ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಪೂರ್ವದಲ್ಲಿ ರಾತ್ರಿ ವರೆಗೂ ಅದ್ಧೂರಿ ಮೆರವಣಿಗೆ ನಡೆಯಿತು.
ನಗರದ ಪ್ರಮುಖ ಗಣೇಶ ಮೂರ್ತಿ ಮಾರಾಟ ಸ್ಥಳಗಳಾಗಿರುವ ಚಿತ್ರಗಾರ ಓಣಿ, ಬಮ್ಮಾಪುರ ಓಣಿ, ಹಳೇಹುಬ್ಬಳ್ಳಿ, ಶಿರಡಿ ನಗರ ಸೇರಿದಂತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಶನಿವಾರ ಗಣೇಶ ಮೂರ್ತಿಗಳ ಖರೀದಿ ಜೋರಾಗಿತ್ತು. ಕುಟುಂಬದವರೆಲ್ಲರೂ ಸೇರಿ ಬಂದು ಮೂರ್ತಿಗೆ ಪೂಜೆ ಸಲ್ಲಿಸಿ ಮನೆಗಳಿಗೆ ಕೊಂಡೊಯ್ದರು. ಇದರೊಂದಿಗೆ ಅಲಂಕಾರಕ್ಕೆ ಬೇಕಾದ ವಸ್ತುಗಳ ಖರೀದಿಯೂ ಭರ್ಜರಿಯಾಗಿ ನಡೆಯಿತು.ಮಹಾರಾಜಾಗೆ 25 ಕೆಜಿ ಬೆಳ್ಳಿಯ ಆಭರಣ: ಇಲ್ಲಿನ ಮರಾಠಾ ಗಲ್ಲಿಯ ಪ್ರತಿಷ್ಠಾಪಿಸಲಾಗಿರುವ ಹುಬ್ಬಳ್ಳಿ ಕಾ ಮಹಾರಾಜ ಗಣೇಶ ಮೂರ್ತಿಗೆ ಆಭರಣದ ರೂಪದಲ್ಲಿ ಸುಮಾರು 25 ಕೆಜಿಗೂ ಅಧಿಕ ಬೆಳ್ಳಿಯ ಬಳಕೆ ಮಾಡಲಾಗಿದೆ. ಈ ಎಲ್ಲ ಬೆಳ್ಳಿಯ ಆಭರಣಗಳನ್ನು ಭಕ್ತರೇ ನೀಡಿರುವುದು ವಿಶೇಷ. ಅಲ್ಲದೇ ಈ ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣನ್ನು ಕೊಲ್ಕತ್ತಾ ಕಲಾವಿದ ಅಪ್ಪು ಪಾಲ್ ಅವರು ಗಂಗಾನದಿ(ಕೊಲ್ಕತ್ತಾ) ಮಣ್ಣನ್ನೇ ಬಳಸುವುದು ವಿಶೇಷ. ಇಲ್ಲಿನ ಹೊಸ ಮ್ಯಾದಾರ ಓಣಿಯಲ್ಲಿ ಸಪ್ತ ಸಾಮ್ರಾಟ ಯುವ ಮಂಡಳದಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗೆ 20 ಗ್ರಾಂ ಸ್ವರ್ಣಲೇಪಿತಗೊಂಡ ಬೃಹತ್ ಗಾತ್ರದ ಹಾರ ಹಾಕಲಾಗಿದೆ.
ಇಂದು ಗಣಹೋಮ, ಸತ್ಯನಾರಾಯಣ ಪೂಜೆ: ನಗರದಲ್ಲಿರುವ ಬಹುತೇಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಸೋಮವಾರ ಬೆಳಗ್ಗೆ ಮೂರ್ತಿ ಸ್ಥಾಪಿತವಾಗಿರುವ ಸ್ಥಳದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ನಂತರ ವಿಸರ್ಜನೆಯಾಗುವ ದಿನದ ವರೆಗೂ ನಿತ್ಯ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಹಿಂದು-ಮುಸ್ಲಿಂ ಭಾಯಿ ಭಾಯಿ: ಇಲ್ಲಿನ ಮಂಟೂರ ರಸ್ತೆಯ ಅರಳಿಕಟ್ಟಿ ಕಾಲನಿಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವ ಮಂಡಳಿ ಜತೆ ಮುಸ್ಲಿಂ ಯುವಕರು ಕೈಜೋಡಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇಲ್ಲಿನ ಮುಸ್ಲಿಂ ನಿವಾಸಿ ದಾವೂದ್ ನದಾಫ ಹಾಗೂ ಅವರ ಸಹೋದರರು ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟಿನ ಸಂದೇಶ ಸಾರಿದ್ದಾರೆ.
ನಗರದ ಪ್ರಿಯದರ್ಶಿನಿ ಕಾಲನಿಯ ಚವ್ಹಾಣ ಪ್ಲಾಟ್‌ನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಇಲ್ಲಿನ ಮುಸ್ಲಿಂ ನಿವಾಸಿ, ಉದ್ಯಮಿ ಶಹಾಬುದ್ದೀನಸಾಬ ತಹಸೀಲ್ದಾರ್ ಎಂಬುವವರು ಭರಿಸಿದ್ದಾರೆ. ಇವರೊಂದಿಗೆ ಹಲವು ಮುಸ್ಲಿಮರು ಅನ್ನಸಂತರ್ಪಣೆ ಸೇರಿದಂತೆ ವಿವಿಧ ಜವಾಬ್ದಾರಿ ಹೊತ್ತುಕೊಂಡು ಸಾಮರಸ್ಯ ಸಾರಿದ್ದಾರೆ. ಅಲ್ಲದೇ ತಾಲೂಕಿನ ಬೀಡ್ನಾಳ ಗ್ರಾಮದಲ್ಲೂ ಹಿಂದೂ- ಮುಸ್ಲಿಮರು ಸೇರಿಕೊಂಡು ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.