ಸಾರಾಂಶ
The commitment of lecturers and students is important to improve PUC results
- ರಾಜ್ಯಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ಆರ್.ಪುಟ್ಟಸ್ವಾಮಿ ಅಭಿಮತ
-----ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಬದ್ಧತೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪಿಹೆಚ್‍ಡಿ ಸಹಿತ ಹತ್ತು ಹಲವು ಪದವಿ ಪಡೆದ ಉಪನ್ಯಾಸಕರು ಎಷ್ಟೇ ಬುದ್ಧಿವಂತರಾಗಿದ್ದರೂ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ತಲುಪದೆ ಹೋದರೆ ತರಗತಿಗಳು ಯಶಸ್ವಿಯಾಗುವುದಿಲ್ಲ ಎಂದರು.
ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ, ಈ ಹಿಂದೆ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುವಾಗ ನೆಮ್ಮದಿಯಿತ್ತು. ಬೋಧನೆ ಹೊರತು ಬೇರೆ ಯಾವುದೇ ಕಾರ್ಯಭಾರ ಇರಲಿಲ್ಲ. ಆದರೆ, ಈಗ ಬೋಧನೆ ಸಹಿತ ಇನ್ನಿತರೆ ಕೆಲಸಗಳ ಒತ್ತಡದಲ್ಲಿ ಕಲಿಸುವುದು ಒಂದು ಭಾಗವಾಗಿ ಮಾತ್ರ ಉಳಿದಿದೆ ಎಂದು ಹೇಳಿದರು.ರಾಜ್ಯಶಾಸ್ತ್ರ ವೇದಿಕೆಯ ಅಧ್ಯಕ್ಷ ಡಾ.ಜೆ.ಮೋಹನ್ ಮಾತನಾಡಿ, ಕಾರ್ಯಾಗಾರಗಳು ಫಲಿಶಾಂಶ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಪ್ರಾಂಶುಪಾಲ ವಿ.ಲೋಕೇಶ್ ಮಾತನಾಡಿ, ಬದಲಾದ ಪಠ್ಯವಸ್ತು, ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಬೋಧನಾ ವಿಧಾನದಲ್ಲಿ ಹೊಸತನ ಕಂಡುಕೊಳ್ಳಲು ಇಂತಹ ಕಾರ್ಯಾಗಾರ ಹೆಚ್ಚು ಸಹಕಾರಿ ಎಂದರು.
ಹಿರಿಯ ಪ್ರಾಂಶುಪಾಲ ಹೆಚ್.ಬಿ.ನರಸಿಂಹಮೂರ್ತಿ, ಜಿ.ದೇವರಾಜ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಡಾ.ಎನ್. ಪ್ರಭಾಕರ್, ಪ್ರಾoಶುಪಾಲೆ ಸರೋಜಮ್ಮ, ಉಪನ್ಯಾಸಕ ಮೀರಾ ನಾಡಿಗ್, ಬುಡೇನ್ ಸಾಬ್, ಆರ್ ಚಂದ್ರಶೇಖರ್ ಉಪಸ್ಥಿತರಿದ್ದರು.-----
ಫೋಟೊ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.ಚಿತ್ರ 1,2