ಕಸಾಪದಿಂದ ಶ್ರಾವಣ ಮಾಸದ ಗೋಷ್ಠಿ ಶ್ಲಾಘನೀಯ: ಯು.ಬಿ. ಬಣಕಾರ

| Published : Aug 29 2024, 12:50 AM IST

ಸಾರಾಂಶ

ಹಳ್ಳಿಗಳಲ್ಲಿ ಎಲ್ಲ ಜನರು ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಹಾಗೂ ಭಕ್ತಿಯಿಂದ ದೇವರನ್ನು ಪೂಜಿಸಿ, ಪುರಾಣ ಪ್ರವಚನಗಳನ್ನು ಏರ್ಪಡಿಸುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವರು ಎಂದು ಶಾಸಕ ಯು.ಬಿ. ಬಣಕಾರ್ ಹೇಳಿದರು.

ಹಿರೇಕೆರೂರು: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರಾವಣ ಮಾಸದಲ್ಲಿ ನಡೆಯುವ ಈ ಗೋಷ್ಠಿಗಳು ಉತ್ತಮವಾಗಿ ನಡೆಯುತ್ತಿರುವುದು ಖುಷಿಯ ವಿಚಾರ ಎಂದು ಶಾಸಕ ಯು.ಬಿ. ಬಣಕಾರ್ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿಇಎಸ್ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಸೋಮವಾರ ಶ್ರಾವಣ ಸಂಜೆಯ ನಾಲ್ಕನೇ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಎಲ್ಲ ಜನರು ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಹಾಗೂ ಭಕ್ತಿಯಿಂದ ದೇವರನ್ನು ಪೂಜಿಸಿ, ಪುರಾಣ ಪ್ರವಚನಗಳನ್ನು ಏರ್ಪಡಿಸುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವರು. ಇಂಥ ಮಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂಥ ಗೋಷ್ಠಿಗಳನ್ನು ಏರ್ಪಡಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.

ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಈ ಗೋಷ್ಠಿಗಳು ಸಾಮಾನ್ಯ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಗೌರವಿಸುವ, ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸುವುದು, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವ ಮೂಲಕ ಸಮಾಜವನ್ನು ಸುಧಾರಿಸಲು ಸಾಧ್ಯ ಎಂದರು.ಉಪನ್ಯಾಸಕರಾದ ಡಾ. ಮಂಜುನಾಥ ಸುಳಗನ್ನಿ ಹನ್ನೆರಡನೇ ಶತಮಾನದ ಶರಣರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಚರಣೆಯ ಮೌಲ್ಯಗಳ ಕುರಿತು ಮಾತನಾಡಿ, ಪ್ರತಿಯೊಬ್ಬ ವಚನಕಾರರು ಅಂದಿನ ಸಮಾಜದಲ್ಲಿ ನಡೆಯುತ್ತಿದ್ದ ಸಾಮಾಜಿಕ ಅಸಮಾನತೆಯ ವಿರುದ್ಧ , ಮೌಢ್ಯದ ಅಂಧಕಾರ, ತೊಡಗಿಸಲು ಪ್ರಯತ್ನ ಮಾಡಿದರು ಎಂದರು. ಅನೇಕ ಧಾರ್ಮಿಕ ವಿಧಿ-ವಿಧಾನಗಳನ್ನು ಅನುಸರಿಸಲು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ಸುರೇಶಕುಮಾರ, ಸಂಸ್ಥೆಯ ಆಡಳಿತಾಧಿಕಾರಿ ವೀರಭದ್ರಯ್ಯ, ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಪಪಂ ಅಧ್ಯಕ್ಷ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡರೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ಈರಣ್ಣ ಬಣಕಾರ, ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ಬಿಇಡಿ ಕಾಲೇಜಿನ ಪ್ರಾಂಶುಪಾಲ ಬಿ.ಪಿ. ಹಳ್ಳೇರ, ಕಾರ್ಯದರ್ಶಿ ಡಾ. ಎಸ್. ಬಿ. ಚನ್ನಗೌಡ್ರ ಮಾತನಾಡಿದರು. ಪಿ.ಎಸ್. ಸಾಲಿ ಕಾರ್ಯಕ್ರಮ ನಿರೂಪಿಸಿದರು. ಎಮ್.ಎಮ್. ಮತ್ತೂರ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು, ಸಿಇಎಸ್ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ, ಗುರುಬಳಗ, ಬಿಇಡಿ ಕಾಲೇಜು, ಕೆ.ಎಚ್. ಪಾಟೀಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಇದ್ದರು.