ಕೊಪ್ಪಳ ಜಿಲ್ಲೆ ಅಂಗನವಾಡಿಗಳ ಸ್ಥಿತಿ ಗಂಭೀರ: ನ್ಯಾಯಾಧೀಶ ಸಿ. ಚಂದ್ರಶೇಖರ ಕಳವಳ

| Published : Aug 10 2024, 01:38 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿಗಳ ಸ್ಥಿತಿ ಮತ್ತು ಅವುಗಳಲ್ಲಿರುವ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಅಂಗನವಾಡಿಗಳಲ್ಲಿನ ಹಲವು ಸಮಸ್ಯೆಗಳ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಸಿ. ಚಂದ್ರಶೇಖರ ಹೇಳಿದರು.

ಕೊಪ್ಪಳ: ಜಿಲ್ಲೆಯಲ್ಲಿ ಅಂಗನವಾಡಿಗಳ ಸ್ಥಿತಿ ಮತ್ತು ಅವುಗಳಲ್ಲಿರುವ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಅಪೌಷ್ಟಿಕತೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಂಗನವಾಡಿಗಳಲ್ಲಿನ ಹಲವು ಸಮಸ್ಯೆಗಳ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಸಿ. ಚಂದ್ರಶೇಖರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹೈಕೋರ್ಟ್‌ನಲ್ಲಿ ಅಪೌಷ್ಟಿಕತೆ ನಿವಾರಣೆ ಕುರಿತಂತೆ ಸ್ವಯಂ ಕೇಸ್ ದಾಖಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಸಲಹಾ ಸಮಿತಿ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷರಾಗಿದ್ದು, ಅವರು ಅಂಗನವಾಡಿಗಳಲ್ಲಿನ ಅಪೌಷ್ಟಿಕತೆಗೆ ಕಾರಣ, ನಿವಾರಣೆಯ ಕುರಿತಂತೆಯೂ ರಾಜ್ಯದ ಎಲ್ಲ ಜಿಲ್ಲೆಗಳ ಅಂಗನವಾಡಿಗಳ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದ್ದಾರೆ.

ಹೀಗಾಗಿ, ಜಿಲ್ಲೆಯಲ್ಲಿನ 53 ಅಂಗನವಾಡಿಗಳನ್ನು ಸುತ್ತಾಡಿ, ನಾನು ಸೇರಿದಂತೆ ಸದಸ್ಯ ಕಾರ್ಯದರ್ಶಿ ಅವರು ಭೇಟಿ ನೀಡಿದ ವೇಳೆ ಅಲ್ಲಿನ ಹಲವು ಅಂಗನವಾಡಿಗಳಲ್ಲಿ ಹಲವಾರು ಸಮಸ್ಯೆಗಳು ಇರುವುದು ಬೆಳಕಿಗೆ ಬಂದಿದೆ. ನಮ್ಮ ನಿರೀಕ್ಷೆಯನ್ನು ಮೀರಿದ ಪರಿಸ್ಥಿತಿ ಇದ್ದು, ಮಕ್ಕಳ ತೀವ್ರ ಸಮಸ್ಯೆಯಲ್ಲಿದ್ದಾರೆ ಎಂದರು.

ಅಂಗನವಾಡಿಗಳಲ್ಲಿ ಸರಿಯಾದ ಸ್ವಚ್ಛತೆ ಇರಲಿಲ್ಲ, ಕೇಂದ್ರದಲ್ಲಿ ಊಟದ ಚಾರ್ಟ್ ಇರಲಿಲ್ಲ. ಮಕ್ಕಳಿಗೆ ಯಾವುದೇ ಚಟುವಟಿಕೆಯ ಮಾಹಿತಿಯೂ ಇರಲಿಲ್ಲ. ಅಂಗನವಾಡಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವುದು ಕಂಡು ಬಂದಿತು. ಶೌಚಾಲಯ ಇಲ್ಲ, ಕೆಲವು ಶೌಚಾಲಯಗಳಿಗೆ ಬಾಗಿಲೂ ಇರಲಿಲ್ಲ. ನೀರಿನ ಸೌಲಭ್ಯವೂ ಇಲ್ಲ. ನೀರಿನ ಟ್ಯಾಂಕ್ ವ್ಯವಸ್ಥೆಯೇ ಇರಲಿಲ್ಲ ಎಂದರು.

ಊಟ, ಉಪಾಹಾರದಲ್ಲಿ ಇರುವುದನ್ನು ಮಾಹಿತಿ ನೀಡಬೇಕು ಎನ್ನುವ ನಿಯಮ ಇದ್ದು, ಅದ್ಯಾವುದನ್ನು ಸಹ ಸರಿಯಾಗಿ ಪಾಲನೆ ಮಾಡದೆ ಇರುವುದು ಸಹ ಭೇಟಿಯ ವೇಳೆಯಲ್ಲಿ ಗೊತ್ತಾಯಿತು. ಆಹಾರದಲ್ಲಿ ದೋಷ ಇರುವುದು, ಉಪ್ಪಿನ ರವೆಯಲ್ಲಿ ನುಸಿ ಇರುವುದು ಸಹ ಕಂಡುಬಂದಿದ್ದನ್ನು, ದಾಖಲು ಮಾಡಿ, ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮಕ್ಕಳಿಗೆ ಕೊಡುವ ಆಟಿಕೆಗಳ ಗುಣಮಟ್ಟವೂ ಕಾಣಲಿಲ್ಲ. ಅವರಿಗೆ ಸಿಗುವಂತೆ ಇರಲಿಲ್ಲ. ಅಂಗನವಾಡಿಗಳಲ್ಲಿ ಸಮಯ ಪಾಲನೆಯೂ ಆಗುತ್ತಿಲ್ಲ, ಬೇಗನೆ ಬಂದ್ ಮಾಡುತ್ತಾರೆ. ಮಧ್ಯಾಹ್ನ 2 ಗಂಟೆಗೆ ಮಕ್ಕಳೇ ಇರಲಿಲ್ಲ. ಕೇಳಿದರೆ ಈಗ ಮನೆಗೆ ಹೋಗಿದ್ದಾರೆ ಎಂದು ಸಹ ಅಲ್ಲಿಯ ಸಿಬ್ಬಂದಿ ಹೇಳಿದರು.

ಮಕ್ಕಳಿಗಾಗಿ ಅಡುಗೆ ಮಾಡಿದ ಲಕ್ಷಣವೂ ಕಾಣಿಸಲಿಲ್ಲ. ದಾಖಲೆ ನಿರ್ವಹಣೆಯಲ್ಲಿ ಪೆನ್ಸಿಲ್‌ನಿಂದ ಬರೆದ ಮಾಹಿತಿ ಇತ್ತು. ಕೆಲವೊಂದು ಬಿಳಿಮಸಿಯಿಂದ ದಾಖಲೆಯನ್ನು ತಿದ್ದಿದ್ದಾರೆ. ಮಕ್ಕಳು ಇರುವ ಸಮಯದಲ್ಲಿ ಒಂದು ರೀತಿಯ ದಾಖಲೆ ಮತ್ತು ಆನಂತರ ಮತ್ತೊಂದು ರೀತಿಯಲ್ಲಿ ದಾಖಲೆ ಬರೆಯುತ್ತಾರೆ. ಮಕ್ಕಳನ್ನು ಗೋಣಿಚೀಲದಲ್ಲಿ ಮಲಗಿಸಿದ್ದನ್ನು ಸಹ ನಾವು ಕಂಡಿದ್ದೇವೆ. ಕಳಪೆ ಮಟ್ಟದ ಆಹಾರ ಪೂರೈಕೆ ಮಾಡಿದ್ದೂ ನಮಗೆ ಗೊತ್ತಾಯಿತು. ಡೇಟ್ ಬಾರ್ ಆಗಿರುವ ಪದಾರ್ಥಗಳು ಇದ್ದವು. 21 ದಾಖಲೆಗಳನ್ನು ನಿರ್ವಹಣೆ ಮಾಡಬೇಕಾದವರು ಒಂದೆರಡು ದಾಖಲೆಗಳನ್ನು ಮಾತ್ರ ನಿರ್ವಹಿಸಿದ್ದಾರೆ. ಕೊಪ್ಪಳದಲ್ಲಿನ ಅಂಗನವಾಡಿಯ ಕುರಿತಂತೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಮಪ್ಪ ಒಡೆಯರ, ಮಹಾಂತೇಶ ಅವರು ಇದ್ದರು.