ಜೈಲಿನಲ್ಲಿರುವ ಕೈದಿಗಳಂತೆ ಹಾಸ್ಟೇಲ್‌ ವಿದ್ಯಾರ್ಥಿಗಳ ಸ್ಥಿತಿ

| Published : Sep 19 2025, 01:00 AM IST

ಜೈಲಿನಲ್ಲಿರುವ ಕೈದಿಗಳಂತೆ ಹಾಸ್ಟೇಲ್‌ ವಿದ್ಯಾರ್ಥಿಗಳ ಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯಗೊಂಡಿದೆ. ವಸತಿ ನಿಲಯದಲ್ಲಿ ಊಟದ ಸಮಸ್ಯೆ ವಿಪರೀತವಾಗಿದ್ದು, ಅನಾರೋಗ್ಯದಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ.

ಧಾರವಾಡ: ಎಲ್ಲ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ವಿದ್ಯಾರ್ಥಿಗಳಿಗೆ ಆಹಾರ ಭತ್ಯೆಯನ್ನು ಕನಿಷ್ಟ ₹4.500ಗೆ ಏರಿಕೆ, ಖಾಲಿ ಇರುವ ವಸತಿ ಶಾಲಾ- ಕಾಲೇಜು ಪ್ರಾಂಶುಪಾಲ, ವಾರ್ಡನ್, ಸಿಬ್ಬಂದಿ ನೇಮಕಾತಿ ಭರ್ತಿಗಾಗಿ ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದರು.

ಇಲ್ಲಿಯ ಕರ್ನಾಟಕ ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಧರಣಿ ನಡೆಸಿ ಜಿಲ್ಲಾ ಪಂಚಾಯತಿ ಸಿಇಓ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಎಸ್ಟಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ಮಾತನಾಡಿ, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯಗೊಂಡಿದೆ. ವಸತಿ ನಿಲಯದಲ್ಲಿ ಊಟದ ಸಮಸ್ಯೆ ವಿಪರೀತವಾಗಿದ್ದು, ಅನಾರೋಗ್ಯದಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ. ಗುಣಮಟ್ಟದ ಆಹಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನೇಮಕಾತಿಗಳ ವಿಳಂಬದ ಕಾರಣದಿಂದಾಗಿ ನಿಲಯ ಪಾಲಕರ, ಸ್ವಚ್ಛತಾ ಸಿಬ್ಬಂದಿ ಕೊರತೆ ಹೆಚ್ಚಿದೆ. ಟೆಂಡರ್‌ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳನ್ನು ಜೈಲಿನಲ್ಲಿರುವ ಕೈದಿಗಳಿಗಿಂತ ಕಡೆಯಾಗಿ ಕಾಣಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಸಮಾಜ ಕಲ್ಯಾಣ ಇಲಾಖೆ ₹14 ಕೋಟಿ ಹಣ ಕೇಳಿದ್ದು, ಸರ್ಕಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ನಾಗರಾಜ ಛಲವಾದಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಭದ್ರತೆ ಇಲ್ಲ, ಆರೋಗ್ಯ ಪರೀಕ್ಷೆ ನಡೆಯುತ್ತಿಲ್ಲ, ವಿದ್ಯಾರ್ಥಿಗಳ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಯುತ್ತಿದೆ. ಸಮಸ್ಯೆಗಳನ್ನು ಪ್ರಶ್ನಿಸಿದರೆ ಅವರನ್ನು ಗುರಿ ಮಾಡಲಾಗುತ್ತಿದೆ. ಎಷ್ಟೋ ವಿದ್ಯಾರ್ಥಿಗಳು ವಸತಿ ನಿಲಯವನ್ನು ಬಿಡುವಂತಾಗಿದೆ ಎಂದರು.

ಸಂಘಟನೆಯ ಶ್ರೀನಿವಾಸ ಎಚ್‌, ಅರುಣ್ ನಾಗವತ್, ಚೈತ್ರ ಶಿವನಣ್ಣನವರ, ರುದ್ರೇಶ್ ನಾಯಕ್, ಮಹೇಶ್ ಮರೋಳ, ನರೇಂದ್ರ, ಶಿವುಕುಮಾರ್ ನಾಯಕ್, ಹನುಮಂತಪ್ಪ ಟಿ, ಲಕ್ಷ್ಮೀ ತಳವಾರ ಮತ್ತಿತರರು ಇದ್ದರು.