ಮೆಗ್ಗಾನ್ ಸಿಬ್ಬಂದಿ ವಸತಿಗೃಹದ ಸ್ಥಿತಿ ಶೋಚನೀಯ

| Published : Jul 24 2024, 12:30 AM IST

ಸಾರಾಂಶ

ಸುಮಾರು 30 ವರ್ಷದ ಹಿಂದೆ ನಿರ್ಮಿಸಿರುವ ಮೆಗ್ಗಾನ್‌ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳು ಗೃಹಗಳು ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಹಾಳಾಗುತ್ತಿವೆ. ನೀರಿನ ಪೈಪ್, ಬಾತ್ ರೂಂನ ಟೈಲ್ಸ್, ಯುಜಿಡಿ, ಚರಂಡಿ, ವಿದ್ಯುತ್ ವ್ಯವಸ್ಥೆ ಹಾಳಾಗಿವೆ.

ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುವ ಸರ್ಕಾರಿ ಮೆಗ್ಗಾನ್‌ ಆಸ್ಪತ್ರೆಯ ಸಿಬ್ಬಂದಿ ವರ್ಗದವರ ವಸತಿ ಗೃಹಗಳು ಮಾತ್ರ ಮನುಷ್ಯರು ವಾಸಿಸುವ ಸ್ಥಿತಿಯಲ್ಲಿಯೇ ಇಲ್ಲ. ಆದರೆ ಅನಿವಾರ್ಯವಾಗಿ ಇಂತಹ ಮನೆಗಳಲ್ಲಿಯೇ ವಾಸಿಸುವ ಸ್ಥಿತಿಯಲ್ಲಿದ್ದಾರೆ!

ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿದ್ದು, ಬೋಧನಾ ಆಸ್ಪತ್ರೆಯಾಗಿರುವ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಯ ವಸತಿ ಗೃಹಗಳ ಗೋಳಿನ ಕತೆಯಿದು.

ಹಾಗೆಂದು ಈ ವಸತಿಗೃಹಗಳ ದುರಸ್ಥಿಗೆ ಹಣದ ಕೊರತೆ ಇದೆ ಎಂದು ಭಾವಿಸಬೇಕಾಗಿಲ್ಲ. ಆದರೆ ಹಿರಿಯ ಅಧಿಕಾರಿಗಳ ಬದ್ಧತೆ, ಕರ್ತವ್ಯಪರತೆ, ಮಾನವೀ ಯತೆಯ ಕೊರತೆಯ ಕಾರಣ ಈ ದುಸ್ಥಿತಿ ಎದುರಿಸುವಂತಾಗಿದೆ. ಮೇಲ್ನೋಟಕ್ಕೆ ಈ ವಸತಿಗೃಹಗಳು ಬಣ್ಣ ಬಳಿದುಕೊಂಡು ಸಿಂಗಾರಗೊಂಡಂತೆ ಕಾಣುತ್ತಿದೆಯಾದರೂ ಒಳ ಹೊಕ್ಕರೆ ಮಾತ್ರ ನಿಜವಾದ ಪರಿಸ್ಥಿತಿಯ ಅನಾವರಣವಾಗುತ್ತದೆ.

ಸುಮಾರು 30 ವರ್ಷದ ಹಿಂದೆ ನಿರ್ಮಿಸಿರುವ ಗೃಹಗಳು ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಹಾಳಾಗುತ್ತಿವೆ. ನೀರಿನ ಪೈಪ್, ಬಾತ್ ರೂಂನ ಟೈಲ್ಸ್, ಯುಜಿಡಿ, ಚರಂಡಿ, ವಿದ್ಯುತ್ ವ್ಯವಸ್ಥೆ ಹಾಳಾಗಿವೆ. ಮೇಲ್ಛಾವಣಿ ಕಿತ್ತು ಬರುತ್ತಿದೆ. ಆರ್‌ಸಿಸಿ ಕಬ್ಬಿಣದ ತುಂಡುಗಳು ಹೊರಗೆ ಚಾಚಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಪ್ಲಾಸ್ಟರ್‌ ಉದುರಿ ಬೀಳುತ್ತಿವೆ. ಮಳೆಗಾಲ ಬಂತೆಂದರೆ ಮನೆಯ ಬಹುತೇಕ ಭಾಗದ ಆರ್ ಸಿಸಿಯಿಂದ ನೀರು ಸೋರುತ್ತದೆ. ಕಿಟಕಿ, ಗೋಡೆಗಳು ಥಂಡಿ ಹಿಡಿದು ಕಿಟಕಿ ಬಾಗಿಲುಗಳು ಹಾಕದಂತಾಗುತ್ತದೆ. ಅಡುಗೆ ಮನೆ, ಬೆಡ್ ರೂಂ, ಬಾತ್ ರೂಂ ಎಂಬ ಬೇಧವಿಲ್ಲದೆ ಎಲ್ಲ ಕಡೆ ನೀರು ತೊಟ್ಟಿಕ್ಕುವುದು ಸಾಮಾನ್ಯ. ಇದು ಈ ವಸತಿಗೃಹಗಳ ದೃಶ್ಯಗಳು!

ಮಳೆಗಾಲದಲ್ಲಿ ನೀರು ಸೋರಿಕೆಯಿಂದಾಗಿ ಮನೆಯ ಸಾಮಗ್ರಿಗಳನ್ನು ಕಷ್ಟಪಟ್ಟು ಕಾಪಾಡಿಕೊಳ್ಳಬೇಕಾದ ಸ್ಥಿತಿ ಈ ನಿವಾಸಿಗಳದ್ದು. ಟಿವಿ, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಿಕ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳು ಒದ್ದೆಯಾಗದಂತೆ ನೋಡಿಕೊಳ್ಳುವುದೇ ಒಂದು ಸವಾಲು! ಬಟ್ಟೆ ಹಾಗೂ ಹಾಸಿಗೆಗಳ ಮೇಲೆ ಕೂಡ ನೀರು ಬಿದ್ದು ಬಳಕೆಗೆ ಬಾರದಂತಾಗುತ್ತದೆ ಎಂಬ ಅಳಲು ಇಲ್ಲಿನ ಬಹುತೇಕರದ್ದು.ಕೆಳ ಹಂತದ ನೌಕರರೇ ವಾಸಿಗಳು:

ಇನ್ನು ಮೆಗ್ಗಾನ್ ಆಸ್ಪತ್ರೆಯ ಡಿ ಗ್ರೂಪ್, ಫಾರ್ಮಸಿಸ್ಟ್ ಹಾಗೂ ಸ್ಟಾಫ್ ನರ್ಸ್ಗಳೇ ಹೆಚ್ಚಾಗಿ ವಾಸ ಮಾಡುತ್ತಿರುವ ಕ್ವಾಟ್ರಸ್ಗಳಲ್ಲಿರುವ ಹೆಚ್ಚಿನವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಬಂದಿರುವ ಕೆಲವೇ ಕೆಲವು ಕಾಯಂ ಜನರು ಇಲ್ಲಿದ್ದಾರೆ. ಹೀಗಾಗಿ ವಸತಿ ಗೃಹಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಸುಮ್ಮನೆ ನುಂಗಿಕೊಳ್ಳಬೇಕಿದೆ. ಅವ್ಯವಸ್ಥೆಯ ಬಗ್ಗೆ ಏನಾದರೂ ದನಿ ಎತ್ತಿದರೆ ಕೆಲಸ ಕಳೆದುಕೊಳ್ಳುವ ಭಯ ಗುತ್ತಿಗೆ ಆಧಾರಿತ ನೌಕರರದ್ದು.

ಹಾಗೆಂದು ಈ ಸಿಬ್ಬಂದಿಗಳಿಗೆ ಈ ವಸತಿ ಗೃಹಗಳನ್ನು ಉಚಿತವಾಗೇನು ನೀಡಿಲ್ಲ. ವೇತನದಲ್ಲಿ ಎಚ್ ಆರ್ ಎ ಎಂದು ಕನಿಷ್ಠ 3 ಸಾವಿರದಿಂದ ಗರಿಷ್ಠ 5 ಸಾವಿರ ರುಪಾಯಿಯನ್ನು ಪ್ರತಿ ತಿಂಗಳು ಕಟ್ ಮಾಡಲಾಗುತ್ತದೆ.

ಒಟ್ಟಿನಲ್ಲಿ ಸಾರ್ವಜನಿಕರ ಅರೋಗ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮೆಗ್ಗಾನ್ ಅಸ್ಪತ್ರೆಯ ಕೆಳ ಹಂತದ ನೌಕರರ ವಸತಿ ಗೃಹಗಳ ಸ್ಥಿತಿ. ಗಿಡಗಂಟಿಗಳ ಕಾಡು-ಕೊಳಚೆ ನೀರು

ಇದೆಲ್ಲ ವಸತಿ ಗೃಹದೊಳಗಿನ ಕತೆಯಾದರೆ ಹೊರ ಭಾಗದ ಕತೆಯೇ ಬೇರೆ.

ವಸತಿಗೃಸಗಳ ಸುತ್ತ ಕಾಡು ಬೆಳೆದಂತೆ ಇರುವ ಗಿಡಗಂಟಿಗಳ ನಿರ್ವಹಣೆ ಎಂಬುದು ಇಲ್ಲಿ ಇಲ್ಲವೇ ಇಲ್ಲ. ನಿರ್ವಹಣೆ ಇಲ್ಲದ ಯುಜಿಡಿ, ಸದಾ ಕಾಲ ನೀರು ನಿಲ್ಲುವ ಗುಂಡಿಗಳು ರೋಗ ಹರಡಲು ಒಳ್ಳೆಯ ವೇದಿಕೆ ಒದಗಿಸುತ್ತಿವೆ. ಗಬ್ಬೆದ್ದು ನಾರುವ ಚರಂಡಿ ಹಾಗೂ ಯುಜಿಡಿಯ ದುರ್ನಾತವನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ನೀರು ನಿಲ್ಲುವ ಗುಂಡಿಗಳಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಬಚಾವ್ ಆಗುವುದು ಕಷ್ಟವಾಗಿದೆ ಎಂದು ನಿವಾಸಿಗಳು ಅಲವತ್ತುಕೊಳ್ಳುತ್ತಾರೆ.

ಹಾಗೆಂದು ಈ ವಸತಿಗಳು ಊರ ಹೊರಗಿದೆ ಎಂದುಕೊಳ್ಳಬೇಕಾಗಿಲ್ಲ. ನಗರದ ಮಧ್ಯ ಭಾಗದಲ್ಲಿ ಸಿಮ್ಸ್ ಆಡಳಿತ ಕಚೇರಿಯಿಂದ ಕೂಗಳತೆ ದೂರದಲ್ಲಿಯೇ ಇದೆ.

ಇದು ಈ ವಸತಿಗೃಹದ ಶೋಚನೀಯ ಸ್ಥಿತಿ. ಆಡಳಿತ ಮಂಡಳಿ ಇನ್ನಾದರೂ ಈ ಬಗ್ಗೆ ಗಮನ ಹರಿಸುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕು. ಇಲ್ಲಿ ವಾಸಿಸುವ ಸಿಬ್ಬಂದಿಗಳ ವರ್ಗಗಳ ಮೌನ ಶಾಪ, ನಿಟ್ಟುಸಿರು ಅಧಿಕಾರಿಗಳನ್ನು ಕಾಡದೆ ಬಿಡದು ಎಂಬ ಮಾತು ಸಣ್ಣ ಸ್ವರದಲ್ಲಿ ಕೇಳಿ ಬರುತ್ತಿದೆ.ನೀವು ಆರೋಗ್ಯ ಇಲಾಖೆಯವರಾ?:

ಈ ವಸತಿಗೃಹದಲ್ಲಿ ವಾಸಿಸುವ ಸಿಬ್ಬಂದಿಗಳ ಸಂಬಂಧಿಕರು ಬಂದರೆ ಮೊದಲಿಗೆ ಕೇಳುವ ಪ್ರಶ್ನೆಯೇ ನೀವು ಆರೋಗ್ಯ ಇಲಾಖೆಯವರಾ? ಎಂಬುದು ಎಂದು ಬೇಸರದಿಂದ ನುಡಿಯುತ್ತಾರೆ.ಇನ್ನು, ಸಣ್ಣಪುಟ್ಟ ದುರಸ್ತಿಯನ್ನು ನಾವೇ ಮಾಡಿಸಿಕೊಳ್ಳುತ್ತೇವೆ. ಆದರೆ ದುಬಾರಿ ಖರ್ಚಿನ ವೆಚ್ಚವನ್ನು ನಮಗೆ ಬರುವ ವೇತನದಲ್ಲಿ ಭರಿಸಲು ಆಗುತ್ತಿಲ್ಲ ಎಂದು ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ದುರಸ್ಥಿ ಜವಾಬ್ದಾರಿ ಯಾರದು?:ಇನ್ನು ಅಸ್ಪತ್ರೆಯ ಸಿಬ್ಬಂದಿಗೆ ನೀಡಲಾಗಿರುವ 55 ಕ್ಕೂ ಹೆಚ್ಚು ಕ್ವಾಟ್ರಸ್ಗಳ ನಿರ್ವಹಣೆಗೆಂದೇ ಟೆಂಡರ್ ಮೂಲಕ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ. ವಸತಿ ಗೃಹಗಳ ದೈನಂದಿನ ಆಗುಹೋಗುಗಳನ್ನು ನೋಡಿಕೊಳ್ಳಲು ಉಸ್ತುವಾರಿ ಸಿಬ್ಬಂದಿಯೂ ಇದ್ದಾರೆ. ಸರ್ಕಾರದಿಂದ ಸಾಕಷ್ಟು ಅನುದಾನವೂ ಬರುತ್ತದೆ. ಆದರೆ ಅವೆಲ್ಲಾ ಪ್ರಭಾವಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವವರ ವಸತಿ ಗೃಹಗಳ ನಿರ್ವಹಣೆಗೆ ಬಳಕೆಯಾಗುತ್ತದೆ. ಹೀಗಾಗಿ ನಮ್ಮಂತಹ ಕೆಳ ಹಂತದ ಸಿಬ್ಬಂದಿಯ ಗೋಳು ಕೇಳುವವರೇ ಇಲ್ಲವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ನಿವಾಸಿಗಳು ಹೇಳುತ್ತಾರೆ.ನಿರ್ದೇಶಕರ ಕಚೇರಿಯಲ್ಲಿ ಕ್ವಾಟ್ರರ್ಸ್ ನಿರ್ವಹಣೆಗೆಂದೇ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಆಸ್ಪತ್ರೆ ಹಾಗೂ ಸಿಮ್ಸ್ನ ಅಧೀನಕ್ಕೊಳಪಟ್ಟ ಕ್ವಾಟ್ರರ್ಸ್ಗಳ ದುರಸ್ತಿ ಹಾಗೂ ನಿರ್ವಹಣೆ ಅವರ ಜವಾಬ್ದಾರಿ. ಆದರೆ ಕೆಳ ಹಂತದ ನೌಕರರ ಅಹವಾಲುಗಳಿಗೆ ಭರವಸೆ ಹೊರತುಪಡಿಸಿ ಇಲ್ಲಿ ಬೆಲೆಯೇ ಇಲ್ಲವಾಗಿದೆ ಎನ್ನುತ್ತಾರೆ.