ಸಾರಾಂಶ
ಚಳ್ಳಕೆರೆ : ಪ್ರಸ್ತುತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಪರ ಚಿಂತನೆಗಳನ್ನು ಹೊಂದಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಳಕು ಹೋಬಳಿ ನೂತನ ನಾಡಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕನಾಗಿ ಎರಡು ವರ್ಷ ಸಮೀಪಿಸುತ್ತಿದ್ದು, ಈ ಹಿಂದೆ 2023ರಲ್ಲಿ ನಾಡಕಚೇರಿಯ ಭೂಮಿಪೂಜೆ ನೆರವೇರಿಸಿದ್ದೆ, ಇಂದು ಹೊಸಕಟ್ಟಡ ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ನಾಡಕಚೇರಿಗೆ ತಳಕು ಹೋಬಳಿಯ ನೂರಾರು ಜನರು ದಾಖಲಾತಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಹೊತ್ತು ನಾಡಕಚೇರಿಗೆ ಆಗಮಿಸುತ್ತಾರೆ. ಸುಸಜ್ಜಿತ ನಾಡಕಚೇರಿ ಕಟ್ಟಡವಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಿತ್ತು. ಆದ್ದರಿಂದ ಸರ್ಕಾರ ಮೇಲೆ ಒತ್ತಡ ಹೇರಿ ನಾಡಕಚೇರಿ ಕಟ್ಟಡ ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ. ಅಧಿಕಾರಿ ವರ್ಗ ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕೆಂಬುವುದು ನನ್ನ ಅಭಿಲಾಷೆಯಾಗಿದೆ. ಯಾವುದೇ ಕಾರಣಕ್ಕೂ ಜನರನ್ನು ಅಲೆದಾಡಿಸದಂತೆ ಅವರ ಕೆಲಸ ಕಾರ್ಯಗಳನ್ನು ದಕ್ಷತೆ, ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಸರ್ಕಾರಕ್ಕೆ ಗೌರವ ತರಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನಾಡಕಚೇರಿ ಉಪತಹಸೀಲ್ದಾರ್ ಮಹಮ್ಮದ್ ರಫೀ, ತಳಕು ಹೋಬಳಿ ಮಟ್ಟದ ಜನರಿಗೆ ನಾಡಕಚೇರಿ ಸಕರಾತ್ಮಕವಾಗಿ ಸ್ಪಂದಿಸುತ್ತಾ ಬಂದಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಸರ್ಕಾರ ಕೆಲಸವನ್ನು ವಿಶ್ವಾಸ, ನಂಬಿಕೆಯಿಂದ ಮಾಡುವ ಮೂಲಕ ಎಲ್ಲರ ವಿಶ್ವಾಸ ಗಳಿಸುವತ್ತ ಮುಂದಾಗಬೇಕು ಎಂದರು.
ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ, ಕಂದಾಯ ಇಲಾಖೆ ಸಾರ್ವಜನಿಕರ ಸೇವಾ ಕೇಂದ್ರವಾಗಿ ಪರಿವರ್ತನೆಯಾಗಿದೆ. ತಾಲೂಕು ಕಚೇರಿಗೆ ಆಗಮಿಸುವ ಎಲ್ಲಾ ಸಾರ್ವಜನಿಕರಿಗೆ ಸಹಕಾರ ನೀಡಬೇಕಿದೆ. ನಿಯಮ ಬಾಹಿರವಾಗಿ ಯಾವುದೇ ಕೆಲಸ ಮಾಡದೆ ಕಾನೂನು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಇಲಾಖೆಗೆ ಉತ್ತಮ ಹೆಸರು ತರಬೇಕು ಎಂದರು.
ಈ ವೇಳೆ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಕುಮಾರ್, ಅಪ್ಪಣ್ಣ, ಮಂಜುನಾಥ, ಕೆಡಿಪಿ ಸದಸ್ಯ ವಿಶ್ವನಾಥರೆಡ್ಡಿ, ತಳಕು ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯರಾದ ಕರೀಂಸಾಬ್, ಲಕ್ಷ್ಮಿದೇವಿ, ಭಾಗ್ಯಮ್ಮ, ಕೃಷ್ಣಮೂರ್ತಿ, ರವಿಕುಮಾರ್, ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಮಂಜಣ್ಣ, ತಿಪ್ಪೇಸ್ವಾಮಿ, ಮಲ್ಲೇಶ್, ನಾಗೇಶ್‌ರೆಡ್ಡಿ ಉಪಸ್ಥಿತರಿದ್ದರು.