ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದ್ದು, ಲೂಟಿ ಮಾಡ್ತಿದೆ

| Published : Apr 28 2024, 01:15 AM IST

ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದ್ದು, ಲೂಟಿ ಮಾಡ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಸರ್ಕಾರ ದರ್ಬಾರ್ ನಡೆಸಿದ್ದು, ಜನರ ಲೂಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಸರ್ಕಾರ ದರ್ಬಾರ್ ನಡೆಸಿದ್ದು, ಜನರ ಲೂಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಪರವಾಗಿ ಪಟ್ಟಣದಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು. ಬಳಿಕ, ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆದ ತಾಲೂಕು ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ಪ್ರರ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕಿಸಾನ್ ಸಮ್ಮಾನ್ ಯೋಜನೆ ಅಡಿ ನಾನು ₹4 ಸಾವಿರ ಕೊಡುತ್ತಿದೆ. ನೀವ್ಯಾಕೆ (ಕಾಂಗ್ರೆಸ್‌) ಬಂದ್ ಮಾಡಿದಿರಿ? ಭಾಗ್ಯ ಲಕ್ಷ್ಮಿ ಯೋಜನೆ ಯಾಕೆ ನಿಲ್ಲಿಸಿದಿರಿ.‌ ಸುವರ್ಣ ಭೂಮಿ ಯೋಜನೆ ನಿಲ್ಲಿಸಿದಿರಿ ಎಂದು ಆಕ್ರೋಶ ಹೊರಹಾಕಿದರು.

ಜನರ ಆಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿರೋಧಿ ಅಲೆ ಹೆಚ್ಚಾಗಿದೆ ಎಂದ ಅವರು, ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುವ ವಾತಾವರಣ ಸೃಷ್ಟಿಯಾಗಿದ್ದು, ಶುಕ್ರವಾರ ಮತದಾನ ನಡೆದ ಕ್ಷೇತ್ರಗಳಲ್ಲಿ ಬಿಜೆಪಿ 14 ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೆ ಹಣ ಬಲ, ಜಾತಿ ಬಲ, ತೋಳ್ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ನವರು ನಂಬಿದ್ದರು. ಕಾಂಗ್ರೆಸ್‌ಗೆ ಪ್ರಚಾರ ಮಾತ್ರ ಬೇಕಿದೆ. ಈ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಏನಾಯಿತು? ವಿದ್ಯುತ್ ದರ ಏರಿಕೆಯಾಗಿದೆ. ಕಿಸಾನ್ ಸಮ್ಮಾನ ಯೋಜನೆ ಹಣ ನೀಡುತ್ತಿಲ್ಲ ಎಲ್ಲಾ ಯೋಜನೆಗಳು ನಿಂತು ಹೋಗಿವೆ. ಇದನ್ನು, ರಾಜ್ಯದ ಜನರು ಅರ್ಥೈಸಿಕೊಳ್ಳಬೇಕಿದೆ ಎಂದರು.

ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಕಳೆದ 10 ವರ್ಷಗಳಿಂದ ಪ್ರಧಾನಿಯಾಗಿ ಒಂದು ದಿನವೂ ವಿಶ್ರಾಂತಿ ಪಡೆಯದೇ ಪಕ್ಷ ಹಾಗೂ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಮೋದಿಯವರ ಕೈ ಬಲಪಡಿಸಬೇಕಿದ್ದು, ಇದೊಂದು ಬಾರಿ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ದೇಶ ವಿದೇಶಗಳಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಸಿಗುತ್ತಿದೆ. ಈ ದಿಸೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ 400 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ ಮುದ್ದೇಬಿಹಾಳ ಕ್ಷೇತ್ರಕ್ಕೆ ₹4500 ಕೋಟಿ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾವುದಾದರೂ ಅನುದಾನ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ಇಂತಹ ಉರಿ ಬಿಸಿಲಿನಲ್ಲೂ ಸಾವಿರಾರು ಜನ ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದನ್ನು ನೋಡಿದರೆ ಈ ಜನರಿಗೆ ಏನು ಕೊಟ್ಟರೂ ಕಡಿಮೆಯೇ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, 2018ರ ಪೂರ್ವದಲ್ಲಿ ಮುದ್ದೇಬಿಹಾಳ ಗಬ್ಬು ನಾರುತಿತ್ತು. ಆಗ ಯಡಿಯೂರಪ್ಪ ನನ್ನ ಕರೆದು ಬಿಜೆಪಿ ಟಿಕೆಟ್‌ ನೀಡಿದರು. ನಂತರ ₹ 4500 ಕೋಟಿ ಅನುದಾನ ಕೊಟ್ಟರು. ಕೇವಲ ಮೂರುವರೆ ವರ್ಷದಲ್ಲಿಯೇ ಇಡೀ ಕ್ಷೇತ್ರದಲ್ಲಿ ಸಕಲ ಅಭಿವೃದ್ಧಿ ಮಾಡಿದೆ ಎಂದರು.

ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ಬಜಾರ ವ್ಯಾಪಾರಸ್ಥರು ಅರ್ಥೈಸಿಕೊಳ್ಳಬೇಕು. ನಿಮ್ಮ ಬಜಾರದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಹಾಗೂ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇತ್ತು. ಕಳೆದ 25 ವರ್ಷಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ನಿಂದ ಒಂದೇ ಒಂದು ಇಂಚು ಸಿಸಿ ರಸ್ತೆ ಮಾಡಲು ಸಾಧ್ಯವಾಗಲಿಲ್ಲ. ಅವರ ಅಧಿಕಾರದಲ್ಲಿ ಮಾಡಲಾಗದ ಕೆಲಸವನ್ನು ನಾನು ಕೇವಲ ಮೂರುವರೆ ವರ್ಷದಲ್ಲಿಯೇ ಮಾದರಿ ಮತಕ್ಷೇತ್ರ ಮಾಡಿ ತೋರಿಸಿದ್ದೇನೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಎರಡು ಭಾಗವಾಗಿ ಸರ್ಕಾರ ಪತನವಾಗಲಿದೆ. ಈ ವೇಳೆ ಮರು ಚುನಾವಣೆ ನಡೆದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ನಿಟ್ಟಿನಲ್ಲಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕುಚಬಾಳ), ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಮಾಜಿ ಎಂಎಲ್‌ಸಿ ಅರುಣ ಶಾಹಾಪೂರ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಜುಗೌಡ ಪಾಟೀಲ, ಮಂಗಳಾದೇವಿ ಬಿರಾದಾರ, ಮಲಕೇಂದ್ರಾಯಗೌಡ ಪಾಟೀಲ, ಎಂ.ಎಸ್.ಪಾಟೀಲ, ಸಿದ್ದರಾಜ ಹೊಳಿ, ಡಾ.ವಿರೇಶ ಪಾಟೀಲ ಸೇರಿದಂತೆ ಅನೇಕರು ಇದ್ದರು.

-----------

೨೭ಎಂಬಿಎಲ್೧: ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರ ಸಭೆಯನ್ನು ಸಸಿಗೆ ನೀರು ಹಾಕುವ ಮೂಲಕ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.

-------------------

ಕೋಟ್‌

ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದರೂ ಯಾರೂ ಬರಲಿಲ್ಲ. ಅವರಿಗೆ ರಾಮನ ಬಗ್ಗೆ ಭಕ್ತಿಯಿಲ್ಲ. ಅದು ಅವರಿಗೆ ಇಷ್ಟವೂ ಇರಲಿಲ್ಲ. ಹಾಗಾಗಿ ಈ ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸಬೇಕು. ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಈ ಬಾರಿ 3 ಲಕ್ಷಕ್ಕೂ ಆಧಿಕ ಮತಗಳಿಂದ ಗೆಲ್ಲುವಂತೆ ಆಶೀರ್ವಾದ ಮಾಡಬೇಕು.

- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ