ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾಂಗ್ರೆಸ್ ಸರ್ಕಾರವೇ ಚೊಂಬುಗಳ ಸರದಾರ ಎಂದು ಸಚಿವ ಸುರೇಶ್ ಕುಮಾರ್ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಚೊಂಬಿನ ಜಾಹಿರಾತು ಸಂಬಂಧ ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿ, ಸಿಎಂಗೆ ಚೊಂಬು ಕೊಡಲು ಡಿಸಿಎಂ ಕಾಯ್ತಿದ್ದಾರೆ, ಡಿಸಿಎಂಗೆ ಚೊಂಬು ಕೊಡಲು ಸಿಎಂ ಕಾಯ್ತಿದ್ದಾರೆ, ಇವರಿಬ್ಬರಿಗೂ ಚೊಂಬು ಕೊಡಲು ಜನ ಕಾಯ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.ಕಾಂಗ್ರೆಸೇ ಚೊಂಬುಗಳ ಸರದಾರ:
ಚೊಂಬುಗಳ ಸರದಾರ ಎಂದರೆ ಅದು ಕಾಂಗ್ರೆಸ್, ಕಳೆದ 10 ತಿಂಗಳುಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ನಾಗರಿಕರಿಗೆ ನೀವು ಕೊಟ್ಟಿರುವ ಚೊಂಬು ಅಲ್ಲವೇ? ನಿರುದ್ಯೋಗಿ ಯುವಕರಿಗೆ ರು. 2000 ಕೊಡುತ್ತೇವೆಂದು ಭರವಸೆ ನೀಡಿ ಮತ ಪಡೆದು ಕಳೆದ 10 ತಿಂಗಳಲ್ಲಿ ಒಬ್ಬರಿಗೂ ನಿರುದ್ಯೋಗ ಭತ್ಯೆ ನೀಡದೆ ಚೊಂಬು ನೀಡಿರುವುದು ನೀವಲ್ಲವೇ? ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಪ್ರತಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 4000 ರು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ನೀಡಿ ತನ್ನ ಕಾಳಜಿ ತೋರಿತ್ತು. ಏನೂ ಕಾರಣ ನೀಡದೆ ಅದನ್ನು ನಿಲ್ಲಿಸಿ ಈ ಅನ್ನದಾತರಿಗೆ ಚೊಂಬು ನೀಡಿರುವುದು ನೀವೇ ಅಲ್ಲವೇ?ಹೀಗೆ ದೇಶದ ಚೊಂಬುಗಳ ಸರದಾರ ನೀವೇ ಆಗಿರುವಾಗ ಬೇರೆಯವರಿಗೆ ಯಾಕೆ ಆ ಪ್ರಶಸ್ತಿ ಎಂದು ಕಿಡಿಕಾರಿದರು.ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ ಅವರು, ಈ ಕೊಲೆ ನಿಜಕ್ಕೂ ದುರಂತದ ಘಟನೆ ನಾನು ಸಿಸಿಟಿವಿಯನ್ನ ನೋಡಿದ್ದೇನೆ, ಚಾಕು ಇರಿದಾಗ ಈ ಹುಡುಗಿಯ ನೋವು ಹೇಗಿರಬಹುದು? ಅದನ್ನ ನೋಡಿದ ತಂದೆ ಮತ್ತು ತಾಯಿಗೆ ಹೇಗೆ ಸಂಕಟವಾಗಿರಬಹುದು, ಯಾವ ದಾಕ್ಷಿಣ್ಯ ಇಟ್ಟುಕೊಳ್ಳದೇ ಮುಕ್ತವಾಗಿ ವಿಚಾರಣೆ ನಡೆಸಬೇಕು, ಒಂದೊಂದು ಜೀವವೂ ಕೂಡ ಅಮೂಲ್ಯಈ ರೀತಿಯ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು, ಸರ್ಕಾರ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಅಭ್ಯರ್ಥಿ ಬಾಲರಾಜ್‌ಗೆ ಇಲ್ಲಿ ಒಳ್ಳೆ ಬೆಂಬಲ ಇದೆ, ಬಾಲರಾಜ್ ಓರ್ವ ಸರಳ ಮತ್ತು ಸಜ್ಜನ ರಾಜಕಾರಣಿ, ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ, ಮೋದಿ ಆಡಳಿತವನ್ನ ಜನ ಬಯಸಿದ್ದಾರೆ ಹಾಗಾಗಿ ಈ ಬಾರಿಯು ಬಾಲರಾಜ್ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.