ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ. ನಿರುದ್ಯೋಗಿ ಪದವೀಧರರಿಗೆ ಯುವ ನಿಧಿ‌ ಕೊಡುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ, ರಾಜ್ಯದಲ್ಲಿ ಬರೀ 60 ಸಾವಿರ ಪದವೀಧರರಿಗೆ ಯುವ ನಿಧಿ ನೀಡುತ್ತಿರುವುದು ವಿಪರ್ಯಾಸ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ನಾನೇ ಕೇಳಿದ ಪ್ರಶ್ನೆಗೆ ಸರ್ಕಾರವೇ ಅಧಿಕೃತವಾಗಿ 6೦ ಸಾವಿರ ಜನರಿಗೆ ಯುವನಿಧಿ ಕೊಡುತ್ತಿರುವುದಾಗಿ ಹೇಳಿದೆ. ಆದರೆ, ರಾಹುಲ್ ಗಾಂಧಿ ಮಾತ್ರ ದೇಶದಲ್ಲಿ ನಿರುದ್ಯೋಗಿಗಳು ತುಂಬಿದ್ದಾರೆ ಎನ್ನುತ್ತಿರುವುದು ಇವರ ದ್ವಂದ್ವ ನಿಲುವಿಗೆ ಸಾಕ್ಷಿ ಎಂದರು.

ಯುವನಿಧಿಗಾಗಿ ಅರ್ಜಿ ಹಾಕಿದವರಿಗೆ ಸರಿಯಾಗಿ ಭತ್ಯೆ ನೀಡದೆ ಪರಿಷ್ಕರಣೆ ನೆಪದಲ್ಲಿ ಅಲೆದಾಡಿಸುವ ಸರ್ಕಾರ ಶಿಕ್ಷಕರು, ಪದವೀಧರರು, ನಿರುದ್ಯೋಗಿಗಳ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮೇಲ್ಮನೆಗೆ ರಾಷ್ಟ್ರದಲ್ಲೇ ಅತ್ಯಂತ ಪ್ರಾಚೀನವಾದ 120 ವರ್ಷಗಳ ಇತಿಹಾಸ ಇದೆ. ಮೈಸೂರು ಮಹಾರಾಜರು ಪ್ರಜಾಪ್ರತಿನಿಧಿ ಸಭಾ ಹೆಸರಿನಲ್ಲಿ ತಜ್ಞರು, ಗಣ್ಯರು, ಚಿಂತಕರನ್ನು ಆಯ್ಕೆ ಮಾಡಿ ಸಲಹೆ ಪಡೆದುಕೊಳ್ಳುತ್ತಿದ್ದರು. ಅದು ಈಗ ವಿಧಾನ ಪರಿಷತ್‌ ಆಗಿ ಮುಂದುವರೆದಿದೆ ಎಂದರು.

ಪದವೀಧರರು, ಶಿಕ್ಷಕರು ಇಲ್ಲಿ ಮತದಾರರಾಗಿದ್ದು, ಬಹಳ ಹಿಂದಿನಿಂದಲೂ ಬಿಜೆಪಿ‌ ಬೆಂಬಲಿಸಿಕೊಂಡು ಬಂದಿದ್ದಾರೆ.

ಆಗ್ನೇಯ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಎರಡು ಬಾರಿ ಜೆಡಿಎಸ್‌ ಗೆದ್ದಿದ್ದು ಬಿಟ್ಟರೆ ಉಳಿದ ಎಂಟು ಸಲ ಬಿಜೆಪಿ, ಜನಸಂಘದ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಪರಿಷತ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗುವುದು ವಿರಳ ಎಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಖಾಲಿ ಇರುವ 2.70 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು.

ಕಳೆದ ಮೂರುವರೆ ವರ್ಷಗಳಲ್ಲಿ‌ ಒಂದೇ ಒಂದು ಹುದ್ದೆ ಭರ್ತಿ ಆಗಿಲ್ಲ. ಕೆಪಿಎಸ್ಸಿ ಭ್ರಷ್ಟ ಕೂಪವಾಗಿರುವ ಸಂಸ್ಥೆಗೆ ಒಂದು ಹುದ್ದೆಗೆ ಒಂದು‌ ಕೋಟಿ ಪಡೆದು ಹುದ್ದೆ ಕೊಡುವ ಕೆಲಸ ಮಾಡಲು‌ ಮುಂದಾದಾಗ ಹಗರಣ ಬೆಳಕಿಗೆ ಬಂದಿದೆ ಎಂದರು.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿದ್ಯಾಸಿರಿ ಯೋಜನೆ ಘೋಷಿಸಿತ್ತು. ಅದನ್ನು ರದ್ದು ಮಾಡಿ ಅನ್ಯಾಯ ಮಾಡಿದ್ದಾರೆ.

ಏಳು ವಿಶ್ವವಿದ್ಯಾನಿಲಯಗಳನ್ನು ಘೋಷಣೆ ಮಾಡಲಾಗಿತ್ತು. ಅವುಗಳನ್ನು ಬಂದ್ ಮಾಡಲಾಗಿದೆ. ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರನ್ನು ಖಾಯಾಂ ಮಾಡುವ ಭರವಸೆ ನೀಡಿದ್ದರು. ಆದರೆ, ಇದ್ದವರನ್ನೇ ಕೆಲಸದಿಂದ ಕಿತ್ತು ಹಾಕಿದರು.

ಒಂದು ಸಂಸ್ಥೆಗೆ ಕೆಲಸಕ್ಕೆ ಹೋಗುತ್ತಿದ್ದವರು ಈಗ ಮೂರು ಸಂಸ್ಥೆಗಳಿಗೆ ಹೋಗುವಂತೆ ಮಾಡಿದ್ದಾರೆ. ರಾಜ್ಯದ 8,312 ಶಾಲೆಗಳಲ್ಲಿ ಒಬ್ಬ ಶಿಕ್ಷಕರು ಮಾತ್ರ ಪಾಠ, ಬಿಸಿಯೂಟ, ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಅವ್ಯವಸ್ಥೆ ಕುರಿತು ವಿವರಿಸಿದರು.

ಸರ್ಕಾರ ಬಂದ ತಕ್ಷಣ ಸರ್ಕಾರಿ ನೌಕರರಿಗೆ ಒಪಿಎಸ್‌ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಸರ್ಕಾರಿ ನೌಕರರು ಬಹಳ ಖುಷಿಯಾಗಿದ್ದರು. ಈ ಸಂಬಂಧ ಸಮಿತಿ ಮಾಡಿದ್ದನ್ನು‌ ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಈ ಸರ್ಕಾರದಲ್ಲಿ ನಿವೃತ್ತರಿಗೆ ಪಿಂಚಣಿ ನೀಡಲು ಹಣವಿಲ್ಲದಂತಹ ಸ್ಥಿತಿಯಿದೆ ಎಂದು ವಾಗ್ದಾಳಿ ಮಾಡಿದರು.

ಈ ಹಿನ್ನೆಲೆಯಲ್ಲಿ ಅ.23 ರಂದು ನಡೆಯುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಯೋಚನೆ ಮಾಡಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್‌, ವೆಂಕಟೇಶ್‌ ಯಾದವ್‌, ವಕ್ತಾರ ನಾಗರಾಜ್‌ ಬೇದ್ರೆ ಇದ್ದರು.