ಕಾಂಗ್ರೆಸ್ ನಾವು ಹುಟ್ಟಿದ್ದೇ ಆಡಳಿತ ನಡೆಸಲು ಎಂಬ ಭ್ರಮೆಯಲ್ಲಿತ್ತು. ಆ ಸೊಕ್ಕನ್ನು ದೇಶದ ಜನರು ಮುರಿದಿದ್ದಾರೆ.
ಕಾರವಾರ: ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರಗಳನ್ನು 90 ಬಾರಿ ಕಿತ್ತು ಹಾಕಿದ ಇತಿಹಾಸವಿರುವ ಕಾಂಗ್ರೆಸ್ಗೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರವಾಗಿ ವಾಗ್ದಾಳಿ ನಡೆಸಿದರು. ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಶ್ಚಿಮ ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ನಾವು ಹುಟ್ಟಿದ್ದೇ ಆಡಳಿತ ನಡೆಸಲು ಎಂಬ ಭ್ರಮೆಯಲ್ಲಿತ್ತು. ಆ ಸೊಕ್ಕನ್ನು ದೇಶದ ಜನರು ಮುರಿದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ಎದುರಿಸಲಾಗದೆ, ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿಯನ್ನೂ ಕಳೆದುಕೊಂಡಿದ್ದಾರೆ. ದೇಶದ್ರೋಹಿಗಳ ಜತೆ ಕೈಜೋಡಿಸಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಎನ್ನುವುದು ಭಾರತೀಯರ ರಕ್ತದಲ್ಲೇ ಅಡಕವಾಗಿದೆ. ಆದರೆ ತಮ್ಮ ಪಕ್ಷದ ಸೋಲನ್ನೇ ಪ್ರಜಾಪ್ರಭುತ್ವದ ಸೋಲು ಎಂದು ಬಿಂಬಿಸಲು ಕಾಂಗ್ರೆಸ್ ಹೊರಟಿದೆ. ಪ್ರಜಾಪ್ರಭುತ್ವ ಯಾರೊಬ್ಬರ ಸ್ವತ್ತೂ ಅಲ್ಲ ಎಂದು ಹರಿಹಾಯ್ದರು.ನಾವು ಹಲವು ರಾಜ್ಯಗಳಲ್ಲಿ ಸೋತಿದ್ದೇವೆ. ಆದರೆ ಎಂದೂ ಇವಿಎಂ ಅನ್ನು ಹೊಣೆ ಮಾಡಿಲ್ಲ. ಮತ್ತೆ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮ್ಮಲ್ಲಿದೆ. ಆದರೆ ಸೋಲನ್ನು ಅರಗಿಸಿಕೊಳ್ಳಲಾರದೆ ಷಡ್ಯಂತ್ರ ರೂಪಿಸುವುದು ಕಾಂಗ್ರೆಸ್ ಗುಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಪರಿಷತ್ ಚುನಾವಣೆ ರಾಜ್ಯದ ಜನರ ನಾಡಿಮಿಡಿತ ಅರಿಯಲು ಮುನ್ನುಡಿಯಾಗಲಿದೆ. ಪ್ರಸಕ್ತ ಆಡಳಿತದ ವೈಫಲ್ಯಗಳು ಜನರ ವಿರೋಧ ಅಲೆಗೆ ಕಾರಣವಾಗುತ್ತಿವೆ ಎಂದ ಸಚಿವರು, ಸಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದರು. ಪರಿಷತ್ನಲ್ಲಿ ಹಿರಿಯ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರನ್ನು ಬೆದರಿಸಿ ಕೆಳಗೆ ಇಳಿಸುವ ಮಟ್ಟಕ್ಕೆ ಕಾಂಗ್ರೆಸ್ ಮುಖಂಡರು ಇಳಿದಿದ್ದು, ಚಿಂತಕರ ಚಾವಡಿಯನ್ನು ಹಾಳುಗೆಡವಿದ್ದಾರೆ. ಅಂತಹ ಸದನಕ್ಕೆ ಸಜ್ಜನ ವ್ಯಕ್ತಿ ಆಯ್ಕೆಯಾಗಲು ಎನ್ಡಿಎ ಅಭ್ಯರ್ಥಿ ಸಂಕನೂರ ಗೆಲುವು ಅನಿವಾರ್ಯ ಎಂದರು.
ಪದವೀಧರರು ಜಾಗ್ರತರಾಗಿ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಪದವೀಧರರು ಜಾಗ್ರತರಾಗಿ ಮತ ಚಲಾಯಿಸಬೇಕು. ಅಭ್ಯರ್ಥಿ ಸಂಕನೂರ ಅವರು ಸದನದಲ್ಲಿ ಪದವೀಧರರ ಪರ ಗಟ್ಟಿ ಧ್ವನಿ ಎತ್ತಿದ್ದಲ್ಲದೆ, ಉದ್ಯೋಗ ಮೇಳಗಳ ಮೂಲಕ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.ಕೇಂದ್ರದ ಯೋಜನೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳುವಂತೆ ಸಚಿವರನ್ನು ವಿನಂತಿಸಿದರು. ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯುವಕರು ಕೆಲಸವಿಲ್ಲದೆ ಪರದಾಡುತ್ತಿದ್ದು, ಭವಿಷ್ಯ ರೂಪಿಸಿಕೊಳ್ಳಲು ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದರು.
ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಹಾಗೂ ಪ್ರಮುಖರಾದ ಆರ್.ಡಿ. ಹೆಗಡೆ, ಹರಿಪ್ರಕಾಶ ಕೋಣೆಮನೆ, ವೆಂಕಟೇಶ ನಾಯಕ, ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ, ಸಂಜಯ ಸಾಳುಂಕೆ, ಶಿವಾಜಿ ನರಸಾನಿ ಇದ್ದರು.