ಕಾಂಗ್ರೆಸ್ ಕೇವಲ ಅಧಿಕಾರ ಹಿಡಿಯುವ ರಾಜಕೀಯ ಪಕ್ಷವಲ್ಲ, ಅದು ದೇಶದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಹೊತ್ತು ಸಾಗುತ್ತಿರುವ ನಿರಂತರ ಚಳವಳಿ

ಕನ್ನಡಪ್ರಭ ವಾರ್ತೆ ಗದಗ

ಕಾಂಗ್ರೆಸ್ ಕೇವಲ ಅಧಿಕಾರ ಹಿಡಿಯುವ ರಾಜಕೀಯ ಪಕ್ಷವಲ್ಲ, ಅದು ದೇಶದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಹೊತ್ತು ಸಾಗುತ್ತಿರುವ ನಿರಂತರ ಚಳವಳಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಶನಿವಾರ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

​ಸಂಘಟನೆಯಲ್ಲಿ ಅಧಿಕಾರಕ್ಕಿಂತ ಜವಾಬ್ದಾರಿಯನ್ನು ನಿಭಾಯಿಸುವುದು ಅತ್ಯಂತ ಮುಖ್ಯವಾಗಿದ್ದು, ಜನಸಾಮಾನ್ಯರ ನೋವು-ನಲಿವುಗಳಿಗೆ ಸದಾ ಸ್ಪಂದಿಸುವುದೇ ಕಾಂಗ್ರೆಸ್‌ನ ಧ್ಯೇಯವಾಗಿದೆ.

ದೇಶದಲ್ಲಿ ಮಹಿಳೆಯರ ಘನತೆ ಮತ್ತು ಹಕ್ಕುಗಳನ್ನು ಎತ್ತಿಹಿಡಿದ ಹೆಗ್ಗಳಿಕೆ ಕಾಂಗ್ರೆಸ್‌ಗೆ ಮಾತ್ರ ಸಲ್ಲುತ್ತದೆ. ಪಕ್ಷದ ಇತಿಹಾಸದಲ್ಲಿ ಐವರು ಮಹಿಳೆಯರು ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಆದರೆ ಬಿಜೆಪಿ ಮತ್ತು ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದ್ದು, ಇಂದು ದೇಶದಲ್ಲಿ ಶೇ. 72ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನಸಾಮಾನ್ಯರ ನಿತ್ಯದ ಬದುಕಿಗೆ ಬೇಕಾದ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಅನ್ನದ ವಿಚಾರಗಳನ್ನು ಬದಿಗಿಟ್ಟು ಹಿಜಾಬ್, ಹಲಾಲ್ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ರಾಜಕಾರಣ ನಡೆಯುತ್ತಿದೆ. ದೆಹಲಿ ಗಡಿಯಲ್ಲಿ ಹೋರಾಟ ನಡೆಸಿ ನೂರಾರು ರೈತರು ಮೃತಪಟ್ಟರೂ ಕಣ್ಣೀರು ಹಾಕದ ಬಿಜೆಪಿ ಸರ್ಕಾರಕ್ಕೆ ಅನ್ನದಾತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಆದರೆ ಹಿಂದೆ ಯುಪಿಎ ಸರ್ಕಾರವಿದ್ದಾಗ ₹72 ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಎಂದು ಸ್ಮರಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವವರು ಮುಂಬರುವ ಜಿಪಂ, ತಾಪಂ ಸೇರಿ ಎಲ್ಲಾ ಚುನಾವಣೆಯಲ್ಲಿ ಯಶಸ್ವಿಯಾಗಿ ನಿಭಾಯಿಸಲಿ ಎಂದರು.