ಸಂವಿಧಾನ ಆಶಯಗಳು ಮಹಿಳೆಗೆ ಪೂರಕವಾಗುತ್ತಿಲ್ಲ

| Published : Apr 07 2024, 01:46 AM IST

ಸಾರಾಂಶ

ಗುಳೇದಗುಡ್ಡ ಸಪ್ರಸ್ತುತ ದಿನಗಳಲ್ಲಿ ಕೂಡು ಕುಟುಂಬಗಳು ವಿಘಟನೆ ಹೊಂದುತ್ತಿವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಒಂದಿಲ್ಲ ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾಳೆ. ಹೆಣ್ಣು ಮಕ್ಕಳು ಕುಟುಂಬದ ಆಧಾರ ಸ್ತಂಭ ಎಂಬುವುದನ್ನು ಸದ್ಯದ ವ್ಯವಸ್ಥೆ ಮರೆಯುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ ಸಪ್ರಸ್ತುತ ದಿನಗಳಲ್ಲಿ ಕೂಡು ಕುಟುಂಬಗಳು ವಿಘಟನೆ ಹೊಂದುತ್ತಿವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಒಂದಿಲ್ಲ ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾಳೆ. ಹೆಣ್ಣು ಮಕ್ಕಳು ಕುಟುಂಬದ ಆಧಾರ ಸ್ತಂಭ ಎಂಬುವುದನ್ನು ಸದ್ಯದ ವ್ಯವಸ್ಥೆ ಮರೆಯುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಕಳವಳ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ (ಬಿ.ಎಡ್) ಮಹಾವಿದ್ಯಾಲಯದ 2023-24 ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಜಾಸತ್ತಾತ್ಮಕ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಂವಿಧಾನ ಎಲ್ಲರಿಗೂ ಎಲ್ಲ ಅವಕಾಶ ನೀಡಿದೆ. ಅದರ ಅನುಸಾರ ಎಲ್ಲರೂ ನಡೆದುಕೊಳ್ಳಬೇಕು. ಆದರೆ, ಪುರುಷ ಪ್ರಧಾನ ವ್ಯವಸ್ಥೆ ಇದಕ್ಕೆ ವಿರುದ್ಧವಾಗಿದೆ ಎಂದರು.

ಸಂವಿಧಾನದ ಆಶಯಗಳು ಮಹಿಳಾ ಪ್ರಪಂಚಕ್ಕೆ ಪೂರಕವಾಗುತ್ತಿಲ್ಲ. ಸಮಾನತೆ, ಸ್ವಾತಂತ್ರ್ಯತೆ ಭಾಷಣಕ್ಕೆ ಸೀಮಿತವಾಗುತ್ತಿವೆ. ವಾಸ್ತವದಿಂದ ದೂರ ಉಳಿದಿವೆ. ಆದರೆ, ಇಂದು ಶರಣರ ಸಮಾನತಾ ಸಮಾಜ ಕಟ್ಟುವ ಅವಶ್ಯಕತೆ ತುಂಬಾ ಇದೆ. ಆ ನಿಟ್ಟಿನಲ್ಲಿ ವರ್ತಮಾನದ ವ್ಯವಸ್ಥೆ ಸ್ಪಂದಿಸಬೇಕು ಎಂದು ನುಡಿದರು.

ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಬಸವರಾಜ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂವಿಧಾನದ ಆಶಯಗಳನ್ನು ನಾವು ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಳ್ಳಬೇಕು. ಜೊತೆಗೆ ಮಕ್ಕಳಿಗೂ ಹೇಳಿಕೊಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದರು.

ಸಂಸ್ಥೆಯ ಚೇರ್ಮನ್ ರಾಜು ಜವಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಪುಷ್ಪ ಮತ್ತು ಸ್ಮೈಲಿ ಪ್ಲ್ಯಾಶ್ ಕಾರ್ಡ್‌ ನೀಡುವ ಮೂಲಕ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಆಯ್ಕೆಯಾದ ನವೀನ ಗಾಡದ ಹಾಗೂ 2022-23 ನೇ ಸಾಲಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಸುಷ್ಮಾ ಚಿತ್ರಗಾರ 7ನೇ ರ್‍ಯಾಂಕ್‌ ಪಡೆದುದಕ್ಕೆ ಸತ್ಕರಿಸಲಾಯಿತು.

ಸಂಸ್ಥೆಯ ಪ್ರಾಚಾರ್ಯ ಡಾ.ಎಚ್.ಎಸ್.ಘಂಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಉಪ ಚೇರ್ಮನ್ ಬಸವಣ್ಣೆಪ್ಪ ಚಿಂದಿ, ನಿರ್ದೇಶಕ ವಿರುಪಾಕ್ಷಪ್ಪ ಅರುಟಗಿ, ಅಯ್ಯಪ್ಪ ವಾಳದುಂಕಿ, ಶಶಿಧರ ಜಾಲಿಹಾಳ, ಸುರೇಶ ರಾಜನಾಳ, ಮಹಿಳಾ ನಿರ್ದೇಶಕಿ ನೇತ್ರಾವತಿ ತಾಂಡೂರ, ಸುರೇಖಾ ತಿಪ್ಪಾ, ಪ್ರೇಮಾ ಚಿಂದಿ, ಉಪನ್ಯಾಸಕಿ ಸರಿತಾ ಚಂದನ್ನವರ, ಬಿ.ಎ.ನದಾಫ್, ಎಸ್.ಎಂ.ನೆಲ್ಲೂರ, ಇಂದುಮತಿ ಬೋರಣ್ಣವರ, ವಿ.ಕೆ.ಬದಿ. ಎಸ್.ಸಿ.ಗದ್ದಿಗೌಡರ ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.