ವಿವಿಧತೆಯಲ್ಲಿ ಏಕತೆ ಹೊಂದಿದ ಬಹು ದೊಡ್ಡ ದೇಶವಾಗಿರುವ ಭಾರತದ ಎಲ್ಲ ವರ್ಗಗಳ ಜನರಿಗೆ ಸಮಾನತೆಯನ್ನು ಕಲ್ಪಿಸುವಲ್ಲಿ ಸಂವಿಧಾನವು ಅತ್ಯಂತ ಪ್ರಮುಖವಾಗಿದೆ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ವಿವಿಧತೆಯಲ್ಲಿ ಏಕತೆ ಹೊಂದಿದ ಬಹು ದೊಡ್ಡ ದೇಶವಾಗಿರುವ ಭಾರತದ ಎಲ್ಲ ವರ್ಗಗಳ ಜನರಿಗೆ ಸಮಾನತೆಯನ್ನು ಕಲ್ಪಿಸುವಲ್ಲಿ ಸಂವಿಧಾನವು ಅತ್ಯಂತ ಪ್ರಮುಖವಾಗಿದೆ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.

ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಕಡೂರು ಮತ್ತು ಬೀರೂರು ಪುರಸಭೆಗಳ ಸಹಯೋಗದಲ್ಲಿ ಬುಧವಾರ ಸಂವಿಧಾನ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈವಿಧ್ಯಮಯ ಸಂಸ್ಕೃತಿಗೆ ಸಮಾನ ಅವಕಾಶ ಒದಗಿಸಿ ಸುಭದ್ರ ಪ್ರಜಾಪ್ರಭುತ್ವದ ಅಡಿಗಲ್ಲಾಗಿ ಸಂವಿಧಾನ ನಿಂತಿದೆ. ಇಂತಹ ಸಂವಿಧಾನ ನಮ್ಮ ಹೆಮ್ಮೆ. ಇದರ ಪರಿಚಯವನ್ನು ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಮಾಡಿಸಬೇಕು. ಹಾಗಾಗಿ ಎಲ್ಲರ ಮನೆಗಳಲ್ಲಿ ಸಂವಿಧಾನದ ಪ್ರತಿ ಇರಬೇಕು. ಶಿಕ್ಷಣದ ಜತೆಗೆ ಸಂವಿಧಾನದ ಮಹತ್ವದ ಅರಿವು ಮೂಡಿಸುವ ಕೆಲಸಗಳೂ ಆಗಲಿ ಎಂದರು.

ಎಚ್‌.ಎ.ಸನಾವುಲ್ಲಾ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಸಂವಿಧಾನ ಪೀಠಿಕೆ ಬೋಧಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್‌ ಕೃಷ್ಣಮೂರ್ತಿ, ದಲಿತ ಸಂಘಟನೆಗಳ ಮುಖಂಡರು ಮಾತನಾಡಿದರು, ಕಾರ್ಯಕ್ರಮದ ಅಂಗವಾಗಿ ಮರವಂಜಿ ವೃತ್ತದ ಬಳಿಯ ಅಂಬೇಡ್ಕರ್‌ ಪ್ರತಿಮೆ ಬಳಿಯಿಂದ ಸಮುದಾಯ ಭವನದವರೆಗೆ ವಿದ್ಯಾರ್ಥಿಗಳು ರಾಷ್ಟ್ರಧ್ವಜ, ಸಂವಿಧಾನ ಪ್ರತಿಕೃತಿ, ಘೋಷಣಾ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರು. ‘ಪ್ರಜಾಪ್ರಭುತ್ವ ದಿನಾಚರಣೆʼ ಅಂಗವಾಗಿ ನಡೆಸಲಾದ ಚಿತ್ರಕಲೆ, ಪ್ರಭಂದ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಆರ್‌.ಪ್ರವೀಣ್‌, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಟಿ.ನಟರಾಜ್‌, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್‌, ಪ್ರಕಾಶ್‌ ನಾಯ್ಕ, ದಲಿತ ಸಂಘಟನೆಗಳ ಮಂಜಪ್ಪ, ಚಂದ್ರಶೇಖರ್‌, ಗಿರೀಶ್‌, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ತವರಾಜ್‌, ಕಡೂರು- ಬೀರೂರು ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.