ಸಾರಾಂಶ
ಶಿಕಾರಿಪುರ: ಸಂಪೂರ್ಣ ಜಗತ್ತನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನಕ್ಕೆ ಇದೆ ಎಂದು ಇಲ್ಲಿನ ಪುರಸಭಾ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೆಕಾಯಿ ಹೇಳಿದರು.
ಶಿಕಾರಿಪುರ: ಸಂಪೂರ್ಣ ಜಗತ್ತನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನಕ್ಕೆ ಇದೆ ಎಂದು ಇಲ್ಲಿನ ಪುರಸಭಾ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೆಕಾಯಿ ಹೇಳಿದರು.
ಸೋಮವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ದಲಿತ ಸಂಘರ್ಷ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಮತ್ತು ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಅವರನ್ನು ಅಂದು ಅಸ್ಪೃಶ್ಯತೆಯಿಂದಾಗಿ ಹೋರದಬ್ಬಲ್ಪಟ್ಟವರು. ಅವರನ್ನೇ ಕರೆದು ತಬ್ಬಿಕೊಳ್ಳುವ ಸ್ಥಿತಿ ಬಂತು. ಶಾಲೆಯಿಂದ ಹೊರ ಹಾಕಿದವರು, ಅವರ ಹೆಸರಿನಲ್ಲಿ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವಂತಾಯಿತು. ಬೃಹತ್ ಪ್ರಜಾಪ್ರಭುತ್ವ ದೇಶಕ್ಕೆ ಕಾನೂನು, ಸಂವಿಧಾನವನ್ನು ಬರೆದು ಅವರೇ ಪ್ರಥಮ ಕಾನೂನು ಸಚಿವರಾಗಿದ್ದು ದೇಶದ ಹೆಮ್ಮೆ ಎಂದರು.
ಬಾಬು ಜಗಜೀವನ್ ರಾಂ, ಹಸಿರು ಕ್ರಾಂತಿಯ ಹರಿಕಾರರಾಗಿದ್ದು, ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಭಾರತಕ್ಕೆ ಮೃಷ್ಠಾನ್ನ ಬಡಿಸಿದ ಮಹಾಪುರುಷ ಎಂದು ಹೇಳಿದರು.ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಪ್ರಪ್ರಥಮ ಸ್ವತಂತ್ರ ಸರ್ಕಾರದಲ್ಲಿ ಕಾನೂನು ಮಂತ್ರಿ ಆಗಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅನೇಕ ದೇಶಗಳ ಸಂವಿಧಾನಗಳ ಕಾನೂನು ಪದ್ಧತಿಗಳ ಅಧ್ಯಯನ ಮಾಡಿ, ಜ್ಞಾನ ಶಿಖರವಾದ ಅವರು ದೇಶಕ್ಕೆ ಬೃಹತ್ ಲಿಖಿತ ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರು ತಿಳಿಯಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ರವಿಕುಮಾರ್, ಇಒ ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಭರತ್, ಬಿಇಒ ಲೋಕೇಶ್ವರಪ್ಪ, ಸಮಾಜಕಲ್ಯಾಣಾಧಿಕಾರಿ ಮಧುಸೂಧನ್. ಕೃಷಿ ಅಧಿಕಾರಿ ಕಿರಣ್ ಕುಮಾರ್ ಹರ್ತಿ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಪುರಸಭಾ ಸದಸ್ಯ ಸುರೇಶ್, ರೂಪಕಲಾ ಹೆಗ್ಡೆ, ಫೈರೋಜಾ ಭಾನು, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಮುಖಂಡ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಜಗದೀಶ್ ಚುರ್ಚುಗುಂಡಿ, ಬಸವರಾಜ ರೋತೆ, ನ್ಯಾಯವಾದಿ ನಿಂಗಪ್ಪ, ತಿಪ್ಪೇಶಪ್ಪ, ಬೂದ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.