ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಸಡಗರ-ಸಂಭ್ರಮದಿಂದ ಜರುಗಿದ ಗಣರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ ಶಿರಸಿನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ವಿವಿಧ ಶಾಲೆಗಳ ಸಮವಸ್ತ್ರಧಾರಿ ಸಾವಿರಾರು ವಿದ್ಯಾರ್ಥಿಗಳ ಉತ್ಸಾಹ, ಸ್ಕೌಟ್ಸ್-ಗೈಡ್ಸ್, ಅರಣ್ಯ, ಪೊಲೀಸ್ ಸಿಬ್ಬಂದಿ ಒಳಗೊಂಡು 41ತಂಡಗಳ ಆಕರ್ಷಕ ಪಥ ಸಂಚಲನ ಗಮನಸೆಳೆದವು. ವಿದ್ಯಾರ್ಥಿಗಳಿಂದ ದೇಶ ಪ್ರೇಮ ಸಾರುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ಸಹಾಯಕ ಆಯುಕ್ತ ಚಂದ್ರಶೇಖರ ಜಿ.ಆರ್. ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ತೆರೆದ ಜೀಪ್‌ನಲ್ಲಿ ತೆರಳಿ ಪಥಸಂಚಲನ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ನ್ಯಾಯದ ಮೌಲ್ಯಗಳಿಗೆ ಬದ್ಧತೆಯನ್ನು ಪುನರುಚ್ಚರಿಸಬೇಕು. ಸಂವಿಧಾನ ಜಾರಿಗೊಳಿಸಿದ ನಂತರ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ಗಣರಾಜ್ಯವಾಯಿತು. ಸಂವಿಧಾನ ನಮ್ಮ ಕಾನೂನು ದಾಖಲೆಯಲ್ಲ, ರಾಷ್ಟ್ರದ ಆತ್ಮ. ಅದು ನಮ್ಮ ಮೂಲಭೂತ ಹಕ್ಕು, ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ, ನ್ಯಾಯದ ಹಕ್ಕನ್ನು ಖಾತ್ರಿಪಡಿಸುತ್ತದೆ. ಮೂಲಭೂತ ಕರ್ತವ್ಯಗಳನ್ನು ನೆನಪಿಸುತ್ತದೆ. ಭಾರತದ ಏಕತೆ, ಸಮಗ್ರತೆ ಎತ್ತಿಹಿಡಿಯುವುದು, ವೈವಿಧ್ಯತೆಯನ್ನು ಗೌರವಿಸುವುದನ್ನು ಇದು ಒತ್ತಿ ಹೇಳುತ್ತದೆ ಎಂದರು.ಶಾಸಕ ಭೀಮಣ್ಣ ನಾಯ್ಕ, ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಈ ಶ್ರೇಷ್ಠ ಸಂವಿಧಾನದ ಆಶಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗಾಗಿ ಓದದೆ, ಸಂಸ್ಕಾರಯುತ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಬೇಕು. ಈ ನಿಟ್ಟಿನಲ್ಲಿ ಶಾಸಕರ ಮಾದರಿ ಶಾಲೆಯ ಅಭಿವೃದ್ಧಿಗೆ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದರು.ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.ಡಿವೈಎಸ್ಪಿ ಗೀತಾ ಪಾಟೀಲ್, ತೋಟಗಾರಿಕಾ ಇಲಾಖೆ ಜಂಟಿ ಉಪನಿರ್ದೇಶಕ ಬಿ.ಪಿ. ಸತೀಶ, ತಹಸೀಲ್ದಾರ ಪಟ್ಟರಾಜ ಗೌಡ, ಇಒ ಚನ್ನಬಸಪ್ಪ ಹಾವಣಗಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಂಡರು. ನಾರಾಯಣ ಭಾಗ್ವತ ಮತ್ತು ಶ್ರೀಧರ ಹೆಗಡೆ ನಿರೂಪಿಸಿದರು.ಪ್ರೋತ್ಸಾಹ ಧನ ವಿತರಣೆ
ಗಣರಾಜ್ಯೋತ್ಸವದಲ್ಲಿ 2024-25ನೇ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಪಡೆದ ಸರ್ಕಾರಿ ಉರ್ದು ಪ್ರೌಢಶಾಲೆಯ ಶಗುಪ್ತ ಅಂಜುಮ್(625), ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ತನುಶ್ರೀ ನರಸಿಂಹ ಜೋಶಿ(624), ಸಿದ್ದಾಪುರ ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯ ತನ್ಮಯಿ ಕೃಷ್ಣಮೂರ್ತಿ ಹೆಗಡೆ(624), ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಾನ್ಯ ಮಂಜುನಾಥ ಹೆಗಡೆ(623), ಪ್ರಣವ ರಾಮಚಂದ್ರ ಹೆಗಡೆ (623) ಹಾಗೂ ಜಿ.ಎನ್. ಸಾಧ್ವಿ (622)ಗೆ ಸರ್ಕಾರವು ಘೋಷಿಸಿದ ₹50 ಸಾವಿರ ಪ್ರೋತ್ಸಾಹ ಧನ ಮತ್ತು ಪ್ರಶಸ್ತಿ ಪತ್ರವನ್ನು ಶಾಸಕ ಭೀಮಣ್ಣ ನಾಯ್ಕ ವಿತರಿಸಿದರು.