ಸಂವಿಧಾನವು ನಮ್ಮ ದೇಶದ ಸರ್ವೋಚ್ಚ ಕಾನೂನಾಗಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕು ಖಾತರಿಪಡಿಸುವ ಜತೆಗೆ ಮೂಲಭೂತ ಕರ್ತವ್ಯಗಳನ್ನೂ ನೆನಪಿಸುತ್ತದೆ.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಸಂವಿಧಾನವು ನಮ್ಮ ದೇಶದ ಸರ್ವೋಚ್ಚ ಕಾನೂನಾಗಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕು ಖಾತರಿಪಡಿಸುವ ಜತೆಗೆ ಮೂಲಭೂತ ಕರ್ತವ್ಯಗಳನ್ನೂ ನೆನಪಿಸುತ್ತದೆ ಎಂದು ಕಲಾ ನಿಕಾಯದ ಡೀನ್ ಪ್ರೊ. ರಾಬರ್ಟ್ ಜೋಸ್ ಅಭಿಪ್ರಾಯಪಟ್ಟರು.ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ @76: ಡಾ. ಬಿ.ಆರ್. ಅಂಬೇಡ್ಕರ್ ಸಾಂವಿಧಾನಿಕ ದೃಷ್ಟಿಕೋನ ಮತ್ತು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನವು ನ್ಯಾಯ, ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವದ ತತ್ವ ಪ್ರತಿಪಾದಿಸುವ ಮೂಲಕ ವೈವಿಧ್ಯತೆಯಲ್ಲಿ ಏಕತೆ ಖಚಿತಪಡಿಸಿದೆ. ಪ್ರತಿಯೊಬ್ಬರೂ ಸಂವಿಧಾನದ ಆದರ್ಶಗಳಿಗೆ ಬದ್ಧರಾಗಿರಬೇಕು ಎಂದರು.ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಪಿ. ಕಣ್ಣನ್ ಮಾತನಾಡಿ, ಭಾರತೀಯ ಸಂವಿಧಾನ ರಚನೆಯ ಹಾದಿ ಸುಲಭವಾಗಿರಲಿಲ್ಲ. 1947ರ ಆಗಸ್ಟ್ 29ರಂದು ಸಂವಿಧಾನ ಕರಡು ಸಮಿತಿ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಸಮಾಜವಾದ, ಜಾತ್ಯತೀತತೆ, ಪ್ರಜಾಸತ್ತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಏಕತೆ ಮತ್ತು ಸಮಗ್ರತೆ ಸಂವಿಧಾನದ ಮೂಲ ಆಶಯಗಳಾಗಿವೆ ಎಂದು ಸ್ಮರಿಸಿದರು.
ಪ್ರಭಾರ ಕುಲಸಚಿವ ಪ್ರೊ. ವಿ.ಲೋಕೇಶ್ ಮಾತನಾಡಿ, ಸಂವಿಧಾನ ದಿನವು ನಮ್ಮ ಹಕ್ಕು, ಕರ್ತವ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯ ಅರಿತುಕೊಳ್ಳುವ ದಿನವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಸಾಂವಿಧಾನಿಕ ಮೌಲ್ಯ ಬೆಳೆಸುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಡಾ. ನಾಗಭೂಷಣ್ ಚರಂತಿಮಠ್ ನೆರೆದಿದ್ದವರಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯಲ್ಲಿ ಕುಲಸಚಿವ ವಿಶ್ವಜೀತ್ ಮೆಹತಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೀರಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.