ಸಾರಾಂಶ
- ದಸಂಸ, ಮಾನವ ಬಂಧುತ್ವ ವೇದಿಕೆಯಿಂದ ಮೌಢ್ಯವಿರೋಧಿ ಪರಿವರ್ತನಾ ದಿನ - - - ಕನ್ನಡಪ್ರಭ ವಾರ್ತೆ ಹರಿಹರ ಇತ್ತೀಚಿನ ದಿನಗಳಲ್ಲಿ ಕೆಲ ಮಠಗಳ ಪೀಠಾಧಿಪತಿಗಳು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸಂವಿಧಾನದ ಆಶೋತ್ತರಗಳಿಗೆ ಧಕ್ಕೆ ತರುತ್ತಿದೆ. ಮೂಢನಂಭಿಕೆ, ಕಂದಾಚಾರಗಳ ವಿರೋಧಿಸಿ ಜನರಲ್ಲಿ ಜಾತ್ಯತೀತ ಮನೋಭಾವನೆ ಹೆಚ್ಚಿಸಬೇಕಾದ ಪೇಜಾವರ ಮಠ ಶ್ರೀಗಳು ನೀಡಿರುವ ಹೇಳಿಕೆ ನಿಜಕ್ಕೂ ಅಹಿಂದ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಮಾನವಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.
ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಹಾಗೂ ಮಾನವ ಬಂಧುತ್ವ ವೇದಿಕೆಯಿಂದ ಶುಕ್ರವಾರ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ 68ನೇ ಮಹಾಪರಿನಿರ್ವಾಣ ಸದ್ಭಾವನಾ ದಿನ ಅಂಗವಾಗಿ ಕೈಲಾಸ ನಗರದ ಹಿಂದೂ ರುದ್ರಭೂಮಿಯಲ್ಲಿ ಏರ್ಪಡಿಸಿದ್ದ ಮೌಢ್ಯವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ದಲಿತರು ಸೇರಿದಂತೆ ಅನೇಕ ಸಮಾಜದವರಲ್ಲಿ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಕೋಣ, ಕುರಿ, ಕೋಳಿಗಳ ಪ್ರಾಣಿ ಬಲಿ ನೀಡುವ, ದೇವದಾಸಿ ಪದ್ಧತಿ ಇನ್ನೂ ಅಲ್ಲಲ್ಲಿ ಕಾಣುತ್ತಿದೆ. ಅಂಥ ಮೌಢ್ಯದಿಂದ ಸುಜ್ಞಾನದೆಡೆಗೆ ಜನರನ್ನು ಜಾಗೃತರನ್ನಾಗಿಸುವ ಗುರುತರ ಜವಾಬ್ದಾರಿ ಮಠಗಳ ಮೇಲಿದೆ. ಆದರೆ, ಪೀಠಾಧಿಪತಿಗಳು, ಸ್ವಾರ್ಥ ಸಾಧನೆ, ಸ್ವಹಿತ ಚಿಂತನೆಗಾಗಿ ರಾಜಕೀಯ ನಾಯಕರಂತೆ ಸಮಾಜ ಸಮಾಜಗಳ ಮಧ್ಯ ಜಗಳ ಹಚ್ಚುವ ಹೇಳಿಕೆ ನೀಡುತ್ತಿರುವುದು ಖಂಡನಿಯ ಎಂದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಮೇಲೆ ದೇಶದಲ್ಲಿ ನಕ್ಸಲರನ್ನು ಮಟ್ಟಹಾಕಿದ್ದೇನೆ, ಮುಂದಿನ ದಿನಗಳಲ್ಲಿ ನಗರ ನಕ್ಸಲರನ್ನೂ ಮಟ್ಟಹಾಕುತ್ತೆನೆಂದು ಹೇಳುತ್ತಿದ್ದಾರೆ. ನಗರ ನಕ್ಸಲರೆಂದರೆ ಯಾರು? ಅದನ್ನು ಮೋದಿಯವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹಗ್ಗೇರಿ ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಅಂಬೇಡ್ಕರ್ ಅವರನ್ನು ಜ್ಞಾನನಿಧಿ ಎಂದು ವಿಶ್ವವೇ ಹಾಡಿ ಹೊಗಳುತ್ತಿದೆ. ಭಾರತದಲ್ಲಿ ಮಾತ್ರ ಅವರನ್ನು ಜಾತಿಯ ಸಂಕೋಲೆಯಲ್ಲಿ ಬಿಂಬಿಸುತ್ತಿರುವುದು ನೊವಿನ ಸಂಗತಿಯಾಗಿದೆ. ಆಧುನಿಕ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಡಿಎಸ್‍ಎಸ್ ತಾಲೂಕು ಅಧ್ಯಕ್ಷ ಮಂಜುನಾಥ ಎಂ. ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಎನ್.ಎಚ್ ಶ್ರೀನಿವಾಸ, ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ಪದಾಧಿಕಾರಿಗಳಾದ ಎಂ.ಬಿ. ಅಣ್ಣಪ್ಪ, ಸಂತೋಷ ನೊಟದವರ, ಮಂಜುನಾಥ ದೊಡ್ಡಮನಿ, ಮಂಜಪ್ಪ ಜಿ.ಎಂ, ವಿಶ್ವ ಬಿ.ಕೆ., ಕಾರ್ಯಕರ್ತರಾದ ಧನರಾಜ್, ಶಿವಕುಮಾರ, ಭಾಸ್ಕರ್ ಬಿ.ಎಂ., ಭರತ್ ಮುದೇನೂರು, ನಾಗರಾಜ್ ರಾಮತೀರ್ಥ, ಪಾರ್ವತಿ ಬೋರಯ್ಯ ಇತರರು ಭಾಗವಹಿಸಿದ್ದರು.- - -
ಕೋಟ್ ಕೇಸರಿ ಶಾಲುಗಳನ್ನು ಹಾಕಿಕೊಂಡು ದಲಿತ ಹಾಗೂ ಹಿಂದುಳಿದ ಸಮಾಜಗಳ ಯುವಕರಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳಾಗಲು ಧರ್ಮ ಸಂಘಟಕರೇ ಕಾರಣರಾಗಿದ್ದಾರೆ. ದಲಿತರು ಹಾಗೂ ಹಿಂದುಳಿದ ಸಮಾಜದವರೆಲ್ಲಾ ಈ ಕುರಿತು ಜಾಗೃತರಾಗಿರಬೇಕು- ಡಾ. ಎ.ಬಿ.ರಾಮಚಂದ್ರಪ್ಪ, ರಾಜ್ಯ ಸಂಚಾಲಕ
- - --06ಎಚ್‍ಆರ್‍ಆರ್03, 03ಎ.ಜೆಪಿಜಿ:
ದಲಿತ ಸಂಘರ್ಷ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿಬ್ಬಣ ಸದ್ಭಾವನಾ ದಿನ ಅಂಗವಾಗಿ ಹಿಂದೂ ರುದ್ರಭೂಮಿಯಲ್ಲಿ ಮೌಢ್ಯವಿರೋಧಿ ಪರಿವರ್ತನಾ ದಿನ ಆಚರಿಸಲಾಯಿತು.