ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಮಟಾ

ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ‍್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದು ತಾಪಂ ಇಒ ರಾಜೇಂದ್ರ ಭಟ್ಟ ಹೇಳಿದರು.

ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿಶೇಷ ಉಪನ್ಯಾಸ ಮಾಡಿದ ಸರಸ್ವತಿ ವಿದ್ಯಾ ಕೇಂದ್ರದ ಮುಖ್ಯಶಿಕ್ಷಕ ಗಣೇಶ ಜೋಶಿ ಸಂಕೊಳ್ಳಿ, ಸಂವಿಧಾನ ರೂಪಿಸಿದ ಮಹಾತ್ಮರನ್ನು ಪೂಜಿಸುವ ಕಾರ್ಯ ಎಲ್ಲೆಡೆ ನಡೆಯಬೇಕು. ಪ್ರತಿಯೊಬ್ಬರೂ ಸಂವಿಧಾನವನ್ನು ಮನ-ಮನೆಯೊಳಗೆ ಅಳವಡಿಸಿಕೊಂಡಾಗ ಮಾತ್ರವೇ ಸಮಾಜ ಮತ್ತು ಸ್ವಂತದ ಸುಂದರ ಬದುಕು ಸೃಷ್ಟಿ ಸಾಧ್ಯ. ಭಾರತೀಯರಿಗೆ ಆಳಿಸಿಕೊಳ್ಳುವವರೇ ಹೊರತು ಸ್ವತಃ ಆಳುವ ಸಾಮರ್ಥ್ಯ ಇಲ್ಲ ಎನ್ನುತ್ತಿದ್ದ ಬ್ರಿಟಿಷರಿಗೆ ನಾವು ನಮ್ಮ ಕಾನೂನು ರೂಪಿಸಿಕೊಳ್ಳುತ್ತೇವೆ ಎಂಬುದರ ದ್ಯೋತಕವಾಗಿ ಸಂವಿಧಾನ ದಿನಾಚರಣೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ತಹಸೀಲ್ದಾರ ಶ್ರೀಕೃಷ್ಣ ಕಾಮಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡಲಾಗಿದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸಲಾಗಿದೆ. ಅವುಗಳ ಅರಿವನ್ನು ಬೆಳೆಸಿಕೊಂಡು ಬದುಕಿದರೆ ದೇಶದ ಹಿತ ಕಾಪಾಡಬಹುದು ಎಂದರು.

ಸಂವಿಧಾನ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಜಾಥಾಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿ, ಸಂವಿಧಾನದ ಅರಿವು ಎಲ್ಲರಲ್ಲಿಯೂ ಇರಬೇಕು. ಡಾ. ಬಿ.ಆರ್ ಅಂಬೇಡ್ಕರರನ್ನು ಸ್ಮರಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಏಳಿಗೆಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪಿಎಸ್‌ಐ ಮಂಜುನಾಥ ಗೌಡರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಆಚಾರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಬೊಮ್ಮಯ್ಯ ಆಗೇರ ಇತರರಿದ್ದರು. ಸತೀಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.