ಸಾರಾಂಶ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರದ ಸಾಮಾನ್ಯ ಪ್ರಜೆಗಳು ನಾಯಕರಾಗಬೇಕು. ಸರ್ವರಿಗೂ ಸಮಪಾಲು, ಸಮಾನ ಅಧಿಕಾರ ದೊರೆಯಬೇಕೆಂಬ ಆಶಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಡಿ ಕಾನೂನು ರೂಪಿಸಿ ಮತದಾನದ ಹಕ್ಕನ್ನು ಒದಗಿಸಿಕೊಟ್ಟವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ಅಂಬೇಡ್ಕರ್ ಅವರು ಬಹಳ ಕನಸನ್ನು ಹೊತ್ತುಕೊಂಡು ಶೋಷಿತರು, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಉಜ್ವಲ ಭವಿಷ್ಯಕ್ಕೆ ಇಡೀ ಜೀವನ ಮುಡಿಪಿಟ್ಟವರು. ಈ ನಡುವೆ ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ವಿರುದ್ಧ ಷಡ್ಯಂತ್ರ ರೂಪಿಸಿ ಸಂವಿಧಾನ ರಚನೆಗೆ ಅಡ್ಡಿಪಡಿಸುತ್ತಿತ್ತು ಎಂದು ಹೇಳಿದರು.ಸಂವಿಧಾನ ರಚನೆ ದಿನವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಕಾನೂನು ದಿನವೆಂದು ಘೋಷಿಸಿತು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂಥ ವೇಳೆಯಲ್ಲಿ ಕಾನೂನು ದಿನವನ್ನು ಸಂವಿಧಾನ ದಿನವೆಂದೇ ಘೋಷಿಸಿ ಅಂಬೇಡ್ಕರ್‌ಗೆ ಸಂಪೂರ್ಣ ಗೌರವ ಸೂಚಿಸುವ ಜೊತೆಗೆ ಅಂತಿಮ ಸಂಸ್ಕಾರ ಮಾಡಿದ ಸ್ಥಳವನ್ನು ಪಂಚಧಾಮಪೀಠವೆಂದು ಅಭಿವೃದ್ಧಿಪಡಿಸಿದ್ದಾರೆ ಎಂದರು.ಜಾತಿ, ಧರ್ಮಗಳ ಪ್ರಭಾವಕ್ಕೆ ಒಳಗಾಗದೇ, ಎಲ್ಲಾ ಭಾರತೀಯರನ್ನು ಒಂದೇ ಸಮಾನರೆಂಬ ನೀತಿ ಅನುಸರಿಸುವ ಪ್ರಜೆ ಗಳನ್ನು ಸಮಾಜದ ಮುಂಚೂಣಿಗೆ ಕರೆತಂದು ಅಧಿಕಾರ ನೀಡುವುದೇ ಅಂಬೇಡ್ಕರ್ ಆಶಯವಾಗಿತ್ತು. ಆದರೆ, ಇತ್ತೀಚೆಗೆ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿ, ಆ ಜನಾಂಗವನ್ನೇ ತುಳಿಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ದೇಶದಲ್ಲಿ ಅಧಿಕಾರದ ಚುಕ್ಕಾಣಿ ಕೈತಪ್ಪಬಾರದೆಂಬ ದೃಷ್ಟಿಯಿಂದ ಮಾಜಿ ಪ್ರಧಾನಿ ನೆಹರು ಕಾಲಘಟ್ಟ ದಿಂದ ವಂಶ ಪಾರಂಪರ್ಯ ರಾಜಕಾರಣ ಕಾಂಗ್ರೆಸ್ ಮಾಡುತ್ತಿತ್ತು. ಇಂದಿರಾಗಾಂಧಿ ನಂತರ ರಾಜಕೀಯ ಗಂಧವಿಲ್ಲದ ರಾಜೀವ್‌ಗಾಂಧಿಗೆ ಅಧಿಕಾರ. ಬಳಿಕ ಸೋನಿಯಾ ಗಾಂಧಿ ತಾಂತ್ರಿಕ ಕಾರಣದಿಂದ ಮನಮೋಹನ್‌ಸಿಂಗ್ ಅವರನ್ನು ಕೈಗೊಂಬೆ ಪ್ರಧಾನಿಯಾಗಿ ಕಾಂಗ್ರೆಸ್ ನೇಮಿಸಿತು ಎಂದು ಆರೋಪಿಸಿದರು.ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ವೈಯಕ್ತಿಕ ಬದುಕನ್ನು ದೂರವಿರಿಸಿ ನಿರಂತರವಾಗಿ ಹಲವಾರು ವರ್ಷಗಳಿಂದ ದೇಶದ ಜನತೆಗಾಗಿ ದುಡಿದಿರುವ ಅಂಬೇಡ್ಕರ್ ರಿಂದ ಸಮಾಜ ಸ್ವಾತಂತ್ರ್ಯವಾಗಿ ಜೀವಿಸುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಸರ್ವರಿಗೂ ಹಕ್ಕು ದೊರೆತಿರುವುದೇ ಅತಿದೊಡ್ಡ ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಸಭಾಧ್ಯಕ್ಷ ಸುಜಾತಾ ಶಿವಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮ ಭರಣ್ಯ, ಮಾಧ್ಯಮ್ ಪ್ರಮುಖ ಎಚ್.ಕೆ.ಕೇಶವಮೂರ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ಮುಖಂಡರಾದ ಜಗದೀಶ್, ಪ್ರದೀಪ್‌ನಾಯ್ಕ್, ಮಂಜುನಾಥ್, ಹಿರೇಮಗಳೂರು ಪುಟ್ಟಸ್ವಾಮಿ, ನಾಗೇಶ್, ಹಂಪಯ್ಯ, ಜೆ.ಡಿ.ಲೋಕೇಶ್, ರೇವನಾಥ್, ಗುರು, ರಘು, ಯತೀಶ್, ಈಶ್ವರಹಳ್ಳಿ ಮಹೇಶ್, ನಿರಂಜನ್ ಇದ್ದರು.6 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಿ.ಟಿ. ರವಿ, ಸುಜಾತಾ ಶಿವಕುಮಾರ್, ದೇವರಾಜ್ ಶೆಟ್ಟಿ, ಕುರುವಂಗಿ ವೆಂಕಟೇಶ್, ಪ್ರದೀಪ್ ನಾಯ್ಕ್ ಇದ್ದರು.