ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯ

ಕನ್ನಡಪ್ರಭ ವಾರ್ತೆ ಕುಣಿಗಲ್

ಸಂವಿಧಾನವು ಪ್ರಜಾಪ್ರಭುತ್ವದ ಅಡಿಪಾಯ, ಸಂವಿಧಾನವು ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಭಾರತೀಯರೆಲ್ಲರಿಗೂ ಸಮಾನತೆಯನ್ನು ಸಾರಿದ ಸಂವಿಧಾನವೇ ಶ್ರೇಷ್ಠ. ಸಾಮಾನ್ಯ ವ್ಯಕ್ತಿಯೂ ಗೌರವಾನ್ವಿತ ಬದುಕು ಕಟ್ಟಿಕೊಳ್ಳುವ ಮುಕ್ತ ಅವಕಾಶ ನೀಡಿದ ಸಂವಿಧಾನ ಭಾರತೀಯರ ಹೆಮ್ಮೆ ಎಂದು ಪ್ರಾಂಶುಪಾಲರಾದ ಡಾ.ಓ.ನಾಗರಾಜು ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರೂಪಿಸಿದ್ದಾರೆ. ಅವರ ನಿಸ್ವಾರ್ಥ ಪರಿಶ್ರಮದ ಫಲವಾಗಿ ಇಂದು ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶ ಜಾತಿ, ಮತಗಳ, ಧರ್ಮ, ಲಿಂಗಗಳ ಶ್ರೇಷ್ಠತೆಯ ವ್ಯಸನದಿಂದ ಹೊರಬಂದು ಸಹೋದರತೆ, ಭ್ರಾತೃತ್ವ, ಭಾವೈಕ್ಯತೆಯಿಂದ ಬಾಳಬೇಕೆಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಧಾಕೃಷ್ಣ ಸಂವಿಧಾನ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ.ಟಿ.ಎನ್.ನರಸಿಂಹಮೂರ್ತಿ, ಅಧ್ಯಾಪಕರಾದ ಮಂಜುನಾಥ್, ಲಕ್ಷ್ಮೀಶ್, ಡಾ.ಕುಮಾರಗೌಡ, ಬೋಧಕೇತರ ಸಿಬ್ಬಂದಿ ಜ್ಯೋತಿ, ತಿಮ್ಮೇಗೌಡ, ರಾಕೇಶ್ ಹಾಜರಿದ್ದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಧರಣೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.