ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸುಸರ್ಜಿತ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ನಡೆದ ವಕೀಲರ ದಿನಾಚರಣೆ, ದಿನಚರಿ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಸುಸರ್ಜಿತ ನ್ಯಾಯಾಲಯ ಕಟ್ಟಡವಿದೆ. ಆದರೆ, ಮಳವಳ್ಳಿಯಲ್ಲಿ ಸ್ಥಳ ನಿಗಧಿಯಾಗಿದ್ದರೂ ಕೂಡ ವ್ಯಕ್ತಿಯೊಬ್ಬರ ದೂರಿನಿಂದ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಕ್ಕಿರಲ್ಲಿಲ್ಲ ಎಂದರು.
ಸದ್ಯಕ್ಕೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನ್ಯಾಯಾಧೀಶರು, ಸಾರ್ವಜನಿಕರು, ವಕೀಲರ ಸಂಘಕ್ಕೆ ಅನುಕೂಲವಾಗುವಂತೆ ಸುಸರ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.ನ್ಯಾಯಾಲಯ ಕಟ್ಟಡ ನಿರ್ಮಾಣ ಸೇರಿದಂತೆ ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಂತ್ರಿಯಾಗಲಿ ಎಂದು ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತೇನೆ. ಮಂತ್ರಿಯಾದರೇ ಖುದ್ದಾಗಿ ನಮ್ಮ ಮನೆದೇವರಿಗೆ ಹೋಗಿ ಹರಕೆ ತೀರುಸುತ್ತೇನೆ. ಜೊತೆಗೆ ಸಚಿವ ಚಲುವರಾಯಸ್ವಾಮಿ ಅವರಿಗೂ ನರೇಂದ್ರಸ್ವಾಮಿ ಅವರನ್ನು ಮಂತ್ರಿ ಮಾಡಿ ಎಂದು ಕೇಳಿಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ 158 ನ್ಯಾಯಾಧೀಶರ ನೇಮಕಕ್ಕೆ ಅರ್ಜಿ ಅಹ್ವಾನಿಸಲಾಗುತ್ತದೆ. ಇದರಿಂದ ವಕೀಲರಿಗೆ ಜ್ಞಾನಾರ್ಜನೆ ಮಾಡಿಕೊಳ್ಳಲು ಗ್ರಂಥಾಲಯ, ಮುಂದುವರಿದ ತಂತ್ರಜ್ಞಾನ ಸೇರಿದಂತೆ ಹಲವಾರು ಅನುಕೂಲಗಳಿವೆ. ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವ ವಕೀಲರು ನ್ಯಾಯಾಧೀಶರಾಗಿ ನೇಮಕಗೊಳ್ಳಬೇಕು, ನಾನು ಕೂಡ ಬೇಕಾದ ಸಲಹೆ ಸಹಕಾರ ನೀಡುತ್ತೇನೆಂದು ಸಲಹೆ ನೀಡಿದರು.ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ವಕೀಲರು ಗೌರವ ನೀಡಬೇಕು, ನ್ಯಾಯಾಲಯದ ಸಂಬಂಧಿಸಿದ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕು, ಗ್ರಾಮೀಣ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ವಕೀಲರ ಸಂಘದ ಜನಪರವಾಗಿ ಮುಂದುವರಿಯಲಿ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಕೊಟ್ಟತಂಹ ಸಂವಿಧಾನದಿಂದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಭಾಗವಾಗಿ ಅಧಿಕಾರ ಪಡೆದಿದ್ದೇವೆ. ಮುಂದೆ ನಡೆಯಬಹುದಾದ ಘಟನಾವಳಿಗಳನ್ನು ಹಿಂದೆಯೇ ಅಂಬೇಡ್ಕರ್ ರವರು ತಮ್ಮ ಬರಹದಲ್ಲಿ ಬರೆದಿದ್ದಾರೆ. ಅವರು ಆಧುನಿಕ ನಿರ್ಮಾತೃವಾಗಿದ್ದಾರೆ. ದಾರ್ಶನಿಕ ಹಾಗೂ ತತ್ವಜ್ಞಾನಿಯಾಗಿರುವ ಡಾ.ಬಿ.ಆರ್ ಅಂಬೇಡ್ಕರ್‌ರವರ ಅದರ್ಶಗಳನ್ನು ಪ್ರತಿಯೊಬ್ಬರು ಪಾಲೀಸಕೆಂದು ತಿಳಿವಳಿಕೆ ನೀಡಿದರು.ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಭೃಂಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಕೀಲರು ತೀರ್ಪುಗಳನ್ನು ಓದಬೇಕು. ಇದರಿಂದ ಭಾಷೆಯಲ್ಲಿ ಹಿಡಿತ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ತಿಳಿಯುತ್ತವೆ. ನ್ಯಾಯಾಲದ ಕಟ್ಟಡ ನಿರ್ಮಾಣಕ್ಕೆ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿಗಳ ಸಲಹೆ ಸಹಕಾರದೊಂದಿಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ ಎಂದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಕೀಲರ ಸಂಘದ ದಿನಚರಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ನ್ಯಾಯಾಲಯದ ನಿವೇಶನ ಸಂಬಂಧ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಶೀಘ್ರದಲ್ಲಿ ಸುಸರ್ಜಿತ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರ ಸಂಘದಿಂದ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ನ್ಯಾಯಾಲಯದ ಕಟ್ಟಡ ನಿರ್ಮಾಣ ಸಂಬಂಧ ಶಾಸಕರು ಹಾಗೂ ನ್ಯಾಯಾಧೀಶರ ವಿಶ್ವಾಸದೊಂದಿಗೆ ಸಮಸ್ಯೆ ಬಗೆಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪೊಲೀಸ್ ಇಲಾಖೆಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್ ರಘು, ಪರಿಷತ್ ಸದಸ್ಯರಾದ ಎನ್. ಶಿವಕುಮಾರ್, ಮಳವಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇದ್ರ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಚಿನ್‌ಕುಮಾರ್ ಶಿವಪೂಜಿ, ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಎಚ್.ಎಸ್ ಕಾವ್ಯಶ್ರೀ ತಹಸೀಲ್ದಾರ್ ಡಾ. ಎಸ್.ವಿ ಲೊಕೇಶ್, ಡಿವೈಎಸ್ಪಿ ವಿ.ಕೃಷ್ಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.