ಅಥಣಿ ಮುರಘೇಂದ್ರ ಶಿವಯೋಗಿಗಳ ಕೊಡುಗೆ ಅಪಾರ: ಶರಣಬಸವ ದೇವರು

| Published : Jan 09 2025, 12:49 AM IST

ಸಾರಾಂಶ

ಮುರುಘೇಂದ್ರ ಶಿವಯೋಗಿಗಳು ಶಿವಶರಣರ ವಚನ ಸಾಹಿತ್ಯವನ್ನು ತಲೆ ಮೇಲೆ ಹೊತ್ತು ಜನರಲ್ಲಿ ಜಾಗತಿ ಮೂಡಿಸಿದರು. ವಚನ ಸಾಹಿತ್ಯ ಬಿಟ್ಟು ಬೇರೆ ಇನ್ನಾವುದೇ ಸಾಹಿತ್ಯವನ್ನು ಶಿವಯೋಗಿಗಳು ಓದಲೇ ಇಲ್ಲ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ ಜಿಲ್ಲೆಯ ಅಥಣಿ ನಗರದ ಗಚ್ಚಿನ ಮಠ ಅನೇಕ ಶ್ರೇಷ್ಠ ಸಾಧಕರನ್ನು ನಾಡಿಗೆ ನೀಡಿದ ಮಹಾನ್ ಮಠ. ಇದಕ್ಕೆಲ್ಲ ಕಾರಣ ಶ್ರೀ ಮುರುಘೇಂದ್ರ ಶಿವಯೋಗಿಗಳು. ಈ ಮಠದ ಕೊಡುಗೆ ನಾಡಿಗೆ ಅಪಾರವಾದುದು ಎಂದು ಬೆಳವಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣಬಸವ ದೇವರು ಹೇಳಿದರು.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆಯುತ್ತಿರುವ ಬ್ರಹ್ಮಾನಂದ ಉತ್ಸವ ಸಮಾರಂಭದಲ್ಲಿ ಶ್ರೀ ಮಠದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ರಚಿಸಿದ ಅನುಭಾವ ನಿವೇದನೆ ಎಂಬ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ಸಮಾನತೆಯ ದೃಷ್ಟಿಯಲ್ಲಿ ಹೆರ್ಡೇಕರ ಮಂಜಪ್ಪನವರಿಗೆ ಲಿಂಗ ದೀಕ್ಷೆ ನೀಡಿದ ಇವರು, ಅಷ್ಟೇ ಅಲ್ಲ ಸ್ವಾತಂತ್ರ‍್ಯ ಹೋರಾಟಗಾರ ಬಾಲಗಂಗಾಧರ ತಿಲಕ, ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ, ಕೆ.ಎಲ್.ಇ ಸಂಸ್ಥಾಪಕರಲ್ಲೊಬ್ಬ ಮತ್ತು ದಾನಿ ಶಿರಸಂಗಿ ಲಿಂಗರಾಜರಿಗೆ ಪ್ರತಿ ಹಂತಗಳಲ್ಲೂ ಮಾರ್ಗದರ್ಶನ ನೀಡಿದ ಕೀರ್ತಿ ಅಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.

ಮೆಳ್ಳಿಗೇರಿ ಅಮ್ಮಲಝರಿ ಶ್ರೀ ಜ್ಞಾನಮಯಾನಂದ ಸ್ವಾಮಿಗಳು ಮಾತನಾಡಿ, ಮುರುಘೇಂದ್ರ ಶಿವಯೋಗಿಗಳು ಶಿವಶರಣರ ವಚನ ಸಾಹಿತ್ಯವನ್ನು ತಲೆ ಮೇಲೆ ಹೊತ್ತು ಜನರಲ್ಲಿ ಜಾಗತಿ ಮೂಡಿಸಿದರು. ವಚನ ಸಾಹಿತ್ಯ ಬಿಟ್ಟು ಬೇರೆ ಇನ್ನಾವುದೇ ಸಾಹಿತ್ಯವನ್ನು ಶಿವಯೋಗಿಗಳು ಓದಲೇ ಇಲ್ಲ. ಅದಕ್ಕಾಗಿಯೇ ಅವರು ಬಸವಣ್ಣನವರನ್ನು ಅಪ್ಪ ಎಂದು ಸಂಬೋಧಿಸುತ್ತಿದ್ದರು ಎಂದ ಅವರು ಇಂತಹ ಮಹಾನ್ ಸಾಧಕ ಮುರುಘೇಂದ್ರ ಶಿವಯೋಗಿಗಳ ಜೀವನ ದರ್ಶನ ನಮಗೆಲ್ಲ ಮಾದರಿ ಎಂದರು.

ಅನುಭಾವ ನಿವೇದನೆ ಗ್ರಂಥದ ಸಂಪಾದನೆ ಮಾಡಿದ ಕಾಲತಿಪ್ಪಿ ಶಿವಾನಂದ ಮರೇಗುದ್ದಿ, ಹಾಗೂ ಜಮಖಂಡಿ ಬಸವಜ್ಯೋತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಬಸವರಾಜ ಕಡ್ಡಿ ಗ್ರಂಥ ಪರಿಚಯಿಸಿ ಮಾತನಾಡಿ, ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಮ್ಮ ಪೀಠಾರೋಹಣ ನಂತರ ಶ್ರೀ ಮಠದಲ್ಲಿ ಪ್ರತಿ ಅಮವಾಸ್ಯೆಯಂದು ಜರುಗಿದ ಅನುಭಾವದಂಗಳ ಆಧ್ಯಾತ್ಮಿಕ ಪ್ರವಚನದ ಸಾರ ಇದಾಗಿದೆ. ಪ್ರವಚನ ನೀಡಿದ ನಾಡಿನ ಹರಗುರು ಚರಮೂರ್ತಿಗಳಿಂದ ಭಕ್ತರಿಗೆ ಉಣಬಡಿಸಿದ ಆಧ್ಯಾತ್ಮಿಕ ಅನುಭವ ಅಮೃತ ಈ ಗ್ರಂಥದಲ್ಲಿದೆ. ಗ್ರಂಥ ಇಂದಿನ ಹಾಗೂ ಮುಂದಿನ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿ ಹಾಗೂ ಸಂಪೂರ್ಣ ಭಾರತೀಯ ಸಂಪ್ರದಾಯದ ಸಮಗ್ರ ಚಿತ್ರಣ ನೀಡುವ ಗ್ರಂಥ ಇದಾಗಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಶ್ರೀ ಮಠದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿತ್ತಲಿ ಸಿದ್ರಾಮೇಶ್ವರಮಠದ ಶ್ರೀ ಮಂಜುನಾಥ ದೇವರು ನೇತೃತ್ವ ವಹಿಸಿದ್ದರು. ಜಮಖಂಡಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಿ. ನಿಂಗಪ್ಪ , ಗಿರೀಶ ಮುತ್ತೂರ, ವಿರುಪಾಕ್ಷಯ್ಯ ಹಿರೇಮಠ, ಡಾ. ವಿನೋದ ಮೇತ್ರಿ, ಶಿರೂರ ಗ್ರಾಮದ ಸಮಸ್ತ ಗುರುಹಿರಿಯರು ಇದ್ದರು. ರಬಕವಿ ಲಿಟಲ್ ಹಾರ್ಟ ಪ್ರೌಢಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ನಂತರ ಶ್ರೀ ಮಠಕ್ಕೆ ತನುಮನಧನದಿಂದ ಸಹಾಯ ಮಾಡಿದವರನ್ನು ಮತ್ತು ಅನೇಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.