ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ವಿಜ್ಞಾನ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದ್ದು, ಬಾಲ್ಯದಿಂದಲೇ ವಿಜ್ಞಾನದ ಪರಿಕಲ್ಪನೆಗಳನ್ನು ಬೆಳೆಸಿದಾಗ ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಲ್ಲಿಸಲು ಸಾಧ್ಯ ಎಂದು ನಿವೃತ್ತ ಮುಖ್ಯಶಿಕ್ಷಕ ಪರಮೇಶ್ವರಪ್ಪ ಎಂ. ಹೇಳಿದರು.ಶನಿವಾರ ಪಟ್ಟಣದ ಭವಾನಿ ರಾವ್ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ ಬಳಸುವ ಪ್ರತಿಯೊಂದು ವಸ್ತುಗಳು ವಿಜ್ಞಾನದ ಕೊಡುಗೆಯಾಗಿದೆ. ಮಕ್ಕಳಿಗೆ ಶಿಕ್ಷಕರು ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು ಹಾಗೂ ಅವರ ಸಾಧನೆಗಳ ಬಗ್ಗೆ ಪರಿಚಯಿಸಿದಲ್ಲಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕೌತುಕ ಹಾಗೂ ಹೊಸ ಅವಿಷ್ಕಾರದ ಕುರಿತು ಆಸಕ್ತಿ ಬೆಳೆದು, ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದರು.ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಗುರಿಗಳನ್ನು ತಲುಪುವ ದಿಸೆಯಲ್ಲಿ ಬೋಧನೆ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಸುಲಭದಲ್ಲಿ ಅರ್ಥೈಸುವ ರೀತಿಯಲ್ಲಿ ಮನಮುಟ್ಟುವಂತೆ ತಿಳಿಸಿದಾಗ, ಸ್ವಸಾಮರ್ಥ್ಯದಿಂದ ಸಾಧಿಸುತ್ತಾರೆ ಎಂದು ತಿಳಿಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳ ಗುರಿಗಳನ್ನು ನಿರ್ಧರಿಸಿ ಆ ನಿಟ್ಟಿನಲ್ಲಿ ಗಮನಕೊಡುವಂತೆ ಮಾಡಬೇಕು. ವಿಜ್ಞಾನದ ವ್ಯಾಪ್ತಿ ವಿಶಾಲವಾಗಿದ್ದು, ವಿಜ್ಞಾನವನ್ನು ಹೊರತುಪಡಿಸಿ, ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅಡುಗೆ ತಯಾರಿಸುವಾಗ ಪಾತ್ರೆ ಮತ್ತು ಉಗಿಯ ಕಲ್ಪನೆಯಿಂದ ಮುಂದೆ ಉಗಿಬಂಡಿಯನ್ನು ಕಂಡುಹಿಡಿಯಲಾಯಿತು. ಹೀಗೆ ಎಲ್ಲದರಲ್ಲೂ ವಿಜ್ಞಾನ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.ಶಾಲೆ ಪ್ರಭಾರ ಮುಖ್ಯಶಿಕ್ಷಕ ಪ್ರಶಾಂತ ಕುಬಸದ ಮಾತನಾಡಿ, ಕಲಿತ ವಿಷಯವನ್ನು ಪರೀಕ್ಷಿಸಲು ಹಲವಾರು ಮಾರ್ಗಗಳಿವೆ. ಅದರಲ್ಲಿ ರಸಪ್ರಶ್ನೆ ಪ್ರಮುಖವಾಗಿದ್ದು, ವಿದ್ಯಾರ್ಥಿಗಳ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯ ದ ಕಡೆ ಹೆಚ್ಚು ಗಮನಹರಿಸಿದಲ್ಲಿ ನಿಸ್ಸಂದೇಹವಾಗಿ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲೆ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿಶ್ವನಾಥ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾಂಶ ಪರೀಕ್ಷಿಸಲು ಈ ತರಹದ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ. ಯೋಜನೆಯೊಂದಿಗೆ ಮಾಡಿದ ಪ್ರತಿಯೊಂದು ಕೆಲಸಗಳು ಯಶಸ್ವಿಯಾಗಿ ಸಾಕಾರಗೊಳ್ಳುತ್ತವೆ. ಪೋಷಕರ ಸಹಕಾರದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಸಪ್ರಶ್ನೆಯ ಸಂಪನ್ಮೂಲ ವ್ಯಕ್ತಿ ವಿದ್ಯಾ ಕೆ., ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅನಂತರದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಜಾಹ್ನವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಮಮತಾ ಸ್ವಾಗತಿಸಿ, ವಿಜಯಲಕ್ಷ್ಮಿ ನಿರೂಪಿಸಿದರು. ಲಕ್ಷ್ಮೀ ವಂದಿಸಿದರು.- - - -2ಕೆಎಸ್.ಕೆ.ಪಿ1:
ಶಿಕಾರಿಪುರದ ಮೈತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಪರಮೇಶ್ವರಪ್ಪ ಮಕ್ಕಳು ಸಿದ್ಧಪಡಿಸಿದ ವಿವಿಧ ವೈಜ್ಞಾನಿಕ ಮಾದರಿಗಳನ್ನು ವೀಕ್ಷಿಸಿದರು.