ಕಠಿಣ ವ್ರತಗಳ ಮೂಲಕ ಸಿದ್ಧಿ ಪಡೆದ ಜೈನ ದಿಗಂಬರ ಮುನಿಗಳ ಆಶೀರ್ವಾದ ಎಲ್ಲರಿಗೂ ಮುಖ್ಯವಾಗಿದೆ.

ಜೈನ ಮುನಿಗಳ ಚಾತುರ್ಮಾಸದ ಕ್ಷಮಾವಳಿ ಪರ್ವದಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸನಾತನ ಧರ್ಮದ ಉಳಿವಿನಲ್ಲಿ ಜೈನ ಧರ್ಮದ ಕೊಡುಗೆ ಅಪಾರವಾಗಿದೆ. ಗೋಸೇವೆ ಹಾಗೂ ಧರ್ಮರಕ್ಷಣೆಯಲ್ಲಿ ತೊಡಗಿಸಿಕೊಂಡವರಿಗೆ ಸೋಲು ಎಂಬುದು ಕನಸಿನ ಮಾತು. ಸನಾತನ ಧರ್ಮದ ಸ್ವಾಮೀಜಿಗಳ ಆಶೀರ್ವಾದ ಇರುವ ವರೆಗೂ ಸಮಾಜಸೇವೆಯೇ ನನ್ನ ಮೊದಲ ಆದ್ಯತೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಛಬ್ಬಿ ಗ್ರಾಮದಲ್ಲಿ ಜೈನ ಮುನಿಗಳ ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಷಮಾವಳಿ ಪರ್ವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಠಿಣ ವ್ರತಗಳ ಮೂಲಕ ಸಿದ್ಧಿ ಪಡೆದ ಜೈನ ದಿಗಂಬರ ಮುನಿಗಳ ಆಶೀರ್ವಾದ ಎಲ್ಲರಿಗೂ ಮುಖ್ಯವಾಗಿದೆ ಎಂದರು.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕಲಿಯುಗದಲ್ಲಿ ಜೈನ ಧರ್ಮದ ಸನ್ಯಾಸತ್ವ ಸ್ವೀಕರಿಸುವುದು ಅತ್ಯಂತ ಕಠಿಣ. ಆದರೂ ಯುವಕ-ಯುವತಿಯರು ಸನ್ಯಾಸತ್ವ ಸ್ವೀಕರಿಸಿ, ಪಾದಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸಿ ಧರ್ಮದ ಪ್ರಭಾವನೆ ಮಾಡುತ್ತಿರುವುದು ಶ್ಲಾಘನೀಯ. ಅವರ ಸಂದೇಶ ಎಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, "ಬಾಳು ಮತ್ತು ಬದುಕಲು ಬಿಡು " ಎಂಬುದು ಜೈನ ಧರ್ಮದ ಶ್ರೇಷ್ಠ ಸಂದೇಶ. ಮಾನವ, ಪ್ರಾಣಿ, ಪಕ್ಷಿ ಹಾಗೂ ಪ್ರಕೃತಿಗೆ ನೋವುಂಟು ಮಾಡದೆ ಬದುಕುವ ತತ್ವವನ್ನು ಜೈನ ಧರ್ಮ ಸಾರುತ್ತದೆ. ಅಹಿಂಸೆ, ಶಾಂತಿ ಮತ್ತು ಕ್ಷಮಾಗುಣದ ಮಹೋನ್ನತ ತತ್ವಗಳು ಮನುಕುಲಕ್ಕೆ ಸದಾ ಬೆಳಕಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಸಿದ್ಧಸೇನ ಮುನಿ ಮಹಾರಾಜರು ಆಶೀರ್ವಚನ ನೀಡಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶೀತಲಕುಮಾರ ಗೂಗಿ, ರವಿ ದಂಡಿನ, ನಿಂಗಪ್ಪ ಸುತಗಟ್ಟಿ, ಛಬ್ಬಿ ಜೈನ ಸಮಾಜದ ಮುಖಂಡರಾದ ರವಿ ಹುಲ್ಲಂಬಿ, ದೇವೇಂದ್ರಪ್ಪ ಕಾಗೇನವರ, ವಿಜಯ ಹನುಮಕ್ಕನವರ, ಸೋಮರಾಯ ಹನುಮಕ್ಕನವರ, ಅನಂತ ಕಲಘಟಗಿ, ಕುಶಾಲ ನಾಗರಳ್ಳಿ ಸೇರಿದಂತೆ ಹಲವರಿದ್ದರು. ದೊಡ್ಡಾಟ ಕಲಾವಿದ ಅಜಿತ ಬಸಾಪುರ ಕಾರ್ಯಕ್ರಮ ನಿರೂಪಿಸಿದರು.