ಆರ್ಥಿಕತೆಗೆ ಸಹಕಾರ ಕ್ಷೇತ್ರ ಕೊಡುಗೆ ಅಪಾರ

| Published : Nov 20 2025, 02:15 AM IST

ಸಾರಾಂಶ

ಸಹಕಾರ ಕ್ಷೇತ್ರ ವಿಶಾಲವಾಗಿದ್ದು ವಿಶ್ವದ, ದೇಶದ ಹಾಗೂ ರಾಜ್ಯದ ವಿವಿಧ ಆರ್ಥಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲರಾವ್ ತಿಳಿಸಿದರು.

ನರಸಿಂಹರಾಜಪುರ: ಸಹಕಾರ ಕ್ಷೇತ್ರ ವಿಶಾಲವಾಗಿದ್ದು ವಿಶ್ವದ, ದೇಶದ ಹಾಗೂ ರಾಜ್ಯದ ವಿವಿಧ ಆರ್ಥಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲರಾವ್ ತಿಳಿಸಿದರು.

ಅವರು ಬುಧವಾರ ಸೀತೂರು ಸಹಕಾರ ಸಂಘದ ಸಭಾಂಗಣದಲ್ಲಿ ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳ ಎಲ್ಲಾ ಸಹಕಾರ ಸಂಘ, ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಸೀತೂರು ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

121 ವರ್ಷದ ಇತಿಹಾಸ ಇರುವ ಸಹಕಾರಿ ಕ್ಷೇತ್ರದಲ್ಲಿ ಈಗಾಗಲೇ 71 ಸಹಕಾರಿ ಸಪ್ತಾಹ ನಡೆದಿದೆ. ಜಿಲ್ಲೆಯಲ್ಲಿ 6ನೇ ದಿನದ ಸಹಕಾರ ಸಪ್ತಾಹ ಹಮ್ಮಿಕೊಂಡಿದ್ದೇವೆ. ದೇಶದಲ್ಲಿ 46 ಸಾವಿರ ಸಹಕಾರ ಸಂಘಗಳಿವೆ. ರಾಜ್ಯದಲ್ಲಿ 6 ಸಾವಿರ ಸೌಹಾರ್ದ ಸಹಕಾರ ಸಂಘಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 635 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರ ಸಪ್ತಾಹ ಕಾರ್ಯಕ್ರಮಗಳಲ್ಲಿ ಸಹಕಾರಿಗಳ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಅತ್ಯುತ್ತಮ ಸೇವೆ ನೀಡಿದ ಸಹಕಾರ ಸಂಘಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತೇವೆ ಎಂದ ಅವರಯ, ಕೇಂದ್ರ ಸರ್ಕಾರವು ಇತ್ತೀಚಿಗೆ ಸಹಕಾರ ಸಚಿವಾಲಯ ತೆರೆದಿದ್ದು, ಅಮಿತ್ ಶಾ ಅವರು ಕೇಂದ್ರ ಸಹಕಾರ ಮಂತ್ರಿಯಾಗಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾ ಮಂಡಳದ ನಿರ್ದೇಶಕ ವೈ.ಎಸ್.ಸುಬ್ರಮಣ್ಯ ದಿನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿ, ಸಹಕಾರಿ ಕ್ಷೇತ್ರದಲ್ಲಿ ನಾವು ಇಚ್ಛೆ ಪಟ್ಟರೆ ಸಾಧನೆ ಮಾಡಲು ಹಲವಾರು ಅವಕಾಶಗಳಿವೆ. ಸಹಕಾರ ಎಂದರೆ ಒಗ್ಗಟ್ಟು, ಸಾಮೂಹಿಕ ಹಿತ ಲಕ್ಷ್ಯ ಮತ್ತು ಲಾಭವನ್ನು ಸಮಾನಾಗಿ ಹಂಚಿಕೆ ಮಾಡುವುದಾಗಿದೆ. ಸಹಕಾರಿಗಳು ಪ್ರವಾಸೋದ್ಯಮವನ್ನು ಅಳವಡಿಸಿಕೊಳ್ಳಬಹುದು. ಸ್ಥಳೀಯ ಜನರು ಸಹಕಾರ ರೂಪದಲ್ಲಿ ಸೇರಿ ಪ್ರವಾಸಿಗರಿಗೆ ಸೇವೆ, ಮಾರ್ಗದರ್ಶನ, ವಸತಿ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರೆ ಇದರ ಲಾಭ ನೇರವಾಗಿ ಸ್ಥಳೀಯರಿಗೆ ಸಿಗಲಿದೆ ಎಂದು ತಿಳಿಸಿದರು.

ಇತ್ತೀಚಿಗೆ ಸರ್ಕಾರಗಳು ಸಹಕಾರ ಸಂಸ್ಥೆಗಳ ಹಿಡಿತಕ್ಕೆ ವಿವಿಧ ಕಾನೂನುಗಳನ್ನು ತರುತ್ತಿವೆ. ಹೊಸ ಕಾನೂನು ಪ್ರಕಾರ ಪ್ರತಿಯೊಬ್ಬ ಸಹಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನ್ನ ಆಸ್ತಿ ಘೋಷಣೆ ಮಾಡಿಕೊಳ್ಳಬೇಕಾಗಿದೆ. ಹೊಸ, ಹೊಸ ಕಾನೂನು ತಂದು ಸಹಕಾರ ವ್ಯವಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ. ಈ ಬಗ್ಗೆ ನಾವು ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದೇವೆ. ಸಹಕಾರ ಕ್ಷೇತ್ರ ಉಳಿಯಬೇಕಾದರೆ ಎಲ್ಲರೂ ಸಹಕಾರ ವ್ಯವಸ್ಥೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕ ಎಚ್‌.ಕೆ.ದಿನೇಶ್ ಮಾತನಾಡಿ, 1905ರಲ್ಲಿ ಪ್ರಥಮವಾಗಿ ಗದಗಿನಲ್ಲಿ ಸಹಕಾರ ಸಂಘ ಪ್ರಾರಂಭವಾಯಿತು. 1935ರಲ್ಲಿ ಮೊದಲ ಬಾರಿಗೆ ರಾಜಸ್ತಾನದಲ್ಲಿ ಡಿ.ಸಿ.ಸಿ.ಬ್ಯಾಂಕ್ ಪ್ರಾರಂಭವಾಯಿತು. ಪ್ರಸ್ತುತ ಎಲ್ಲಾ ಹಳ್ಳಿ, ಹಳ್ಳಿಗಳಲ್ಲೂ ಸಹಕಾರ ಸಂಘ ಪ್ರಾರಂಭವಾಗಿದೆ. ಸಹಕಾರ ಸಂಘವು ತನ್ನ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ಸಾಲ ನೀಡುತ್ತದೆ. ಸೌಹಾರ್ದ ಸಂಘಗಳಿಗೆ ವ್ಯಾಪ್ತಿ ಇರುವುದಿಲ್ಲ ಎಂದು ತಿಳಿಸಿದರು.

ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾ ಮಂಡಳ ನಿರ್ದೇಶಕ ಕೆ.ವಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ 600 ಲ್ಯಾಂಪ್ಸ್ ಸಹಕಾರ ಸಂಘಗಳಿವೆ. ರಾಜ್ಯದಲ್ಲಿ 23, ಜಿಲ್ಲೆಯಲ್ಲಿ 2 ಸಂಘಗಳಿವೆ. ಜಿಲ್ಲೆಯ 23 ಲ್ಯಾಂಪ್ಸ್ ಸೊಸೈಟಿಗಳಲ್ಲಿ ಕೊಪ್ಪ ಲ್ಯಾಂಪ್ಸ್ ಸೊಸೈಟಿಯು ಹೆಚ್ಚು ವ್ಯಾಪಾರ ಮಾಡಿದ ಕೀರ್ತಿಗೆ ಭಾಜನವಾಗಿದೆ ಎಂದರು.

ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ್ ಮಾತನಾಡಿದರು.

ಜಿಲ್ಲಾ ಹಾಪ್ ಕಾಮ್ಸ್ ಉಪಾಧ್ಯಕ್ಷ ಎನ್‌.ಪಿ.ರವಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಟಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೀಪ್ ಕುಮಾರ್, ಕರಿಮನೆ ಶ್ರೀರಾಮ ಸೇವಾ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷೆ ಕೆ.ಎಸ್.ನಾಗರತ್ನ, ಎನ್‌.ಆರ್.ಪುರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ಎನ್‌.ಆರ್.ಪುರ ಟಿಎಪಿಸಿಎಂಎಎಸ್ ಅಧ್ಯಕ್ಷ ಎಸ್‌.ಗೋಪಾಲ್, ಕೊಪ್ಪ ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷ ಎಂ.ಸಿ.ಯೋಗೀಶ್, ಮುತ್ತಿನಕೊಪ್ಪ ಸಹಕಾರ ಸಂಘದ ಅಧ್ಯಕ್ಷ ನೀಲೇಶ್, ಜಯಪುರ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರ, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರುಗಳಾದ ಮಂಜಣ್ಣ, ಪ್ರಕಾಶ್, ಸುಧಾಕರ, ನಾರಾಯಣಗೌಡ, ಈಶ್ವರ್ ಇದ್ದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲ ರಾವ್ ಸಹಕಾರ ದ್ವಜಾರೋಹಣ ನೆರವೇರಿಸಿದರು. ಯಶಸ್ ಸ್ವಾಗತಿಸಿದರು. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಸುಫೀಲ್ ವಂದಿಸಿದರು.

ಅತ್ಯುತ್ತಮ ಸಹಕಾರ ಸಂಘಗಳ ಪ್ರಶಸ್ತಿ ಪ್ರದಾನ

ಸೀತೂರಿನಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಹಕಾರ ಸಂಘಗಳ ಪ್ರಶಸ್ತಿ ವಿತರಿಸಲಾಯಿತು.

ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಸಹಕಾರ ಸಂಘ ಹಾಗೂ ಕೊಪ್ಪ ತಾಲೂಕಿನ ಜಯಪುರ ಸಹಕಾರಕ್ಕೆ ಅತ್ಯುತ್ತಮ ಸಹಕಾರ ಪ್ರಶಸ್ತಿ ನೀಡಲಾಯಿತು. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಎನ್.ಆರ್.ಪುರ ಪಿಸಿಎಆರ್‌ಡಿ ಬ್ಯಾಂಕ್ ಅತ್ಯುತ್ತಮ ಪಿಕಾರ್ಡ್ ಬ್ಯಾಂಕ್ ಹಾಗೂ ಎನ್.ಆರ್.ಪುರ ಟಿಎಪಿಸಿಎಂಎಸ್ ಅತ್ಯುತ್ತಮ ಸಂಸ್ಥೆ ಎಂದು ಪ್ರಶಸ್ತಿ ನೀಡಿ ಸಂಘಗಳ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.