ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕನ್ನಡ ರಂಗಭೂಮಿಗೆ ಚಿತ್ರದುರ್ಗ ಜಿಲ್ಲೆಯ ವೃತ್ತಿ ರಂಗಭೂಮಿ ಕಲಾವಿದರು ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಹೇಳಿದರು.ತಾಲೂಕಿನ ಸಕ್ಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಹಾಗೂ ಧಾತ್ರಿ ರಂಗಸಂಸ್ಥೆ ಸಿರಿಗೇರಿಯ ಆಶ್ರಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.1997ರ ಪೂರ್ವದಲ್ಲಿ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ, ಹೊಸದುರ್ಗ, ಹರಿಹರ, ದಾವಣಗೆರೆ, ಜಗಳೂರು ತಾಲೂಕುಗಳನ್ನು ಒಳಗೊಂಡ ಜಿಲ್ಲೆಗಳಲ್ಲಿ ಕಲೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರ ವಿಫುಲವಾಗಿ ಬೆಳೆದಿತ್ತು. ಕರ್ನಾಟಕ ವೃತ್ತಿ ನಾಟಕ ರಂಗದಲ್ಲಿ ದಾವಣಗೆರೆಯ ಚಿoದೋಡಿ ಲೀಲಾ ಅವರು ರಾಜ್ಯಕ್ಕೆ ಪ್ರಸಿದ್ಧಿ ಪಡೆದಿದ್ದರು. ದುರ್ಗದ ಶ್ರೀ ಓಂಕಾರೇಶ್ವರ ನಾಟಕ ಸಂಘ, ಕುಮಾರೇಶ್ವರ ನಾಟಕ ಸಂಘ, ಹುಣಸೆಕಟ್ಟೆಯ ಶ್ರೀ ಕುಮಾರೇಶ್ವರ ಕೃಪ ನಾಟಕ ಸಂಘ, ಜಿಲ್ಲಾ ಕಲಾವಿದರ ಸಂಘ, ದುರ್ಗದ ಸಿರಿ ಕಲಾ ಸಂಘ, ನವತರುಣ ಕಲಾವಿದರ ಸಂಘ, ಸಿರಿಗೆರೆ ಬೃಹನ್ಮಠ, ಜಮುರಾ ಕಲಾಲೋಕ, ಸಾಣೆಹಳ್ಳಿಯ ಶಿವ ಸಂಚಾರ, ಕಬೀರಾನಂದ ಮಠ, ರಚನಾ ಕಲಾ ಸಂಘ, ಹಿರಿಯೂರಿನ ಭಾರತಿ ಕಲಾವಿದರ ಸಂಘ ಹೀಗೆ ಹಲವಾರು ಸಂಘ ಸಂಸ್ಥೆಗಳು ರಂಗಭೂಮಿ ಉಳಿವಿಗೆ ದುಡಿದಿವೆ ಎಂದರು.
ರಂಗ ಕಲಾವಿದರಾದ ಸಿ.ಜಿ.ಕೃಷ್ಣಮೂರ್ತಿ, ಆಶೋಕ್ ಬಾದರದಿನ್ನಿ, ವರದರಾಜ್, ರತ್ನಾಕರ್, ಓಬಳೇಶ್, ಹರ್ತಿಕೋಟೆಯ ಸುಬ್ಬರಾಯ, ಚಿoದೋಡಿ ವೀರಪ್ಪ, ಚಿಂದೋಡಿಲೀಲಾ, ಬಂಗಾರೇಶ್, ಬಿ.ಲಕ್ಷ್ಮಯ್ಯ, ಕೊಂಡ್ಲಹಳ್ಳಿಯ ಅಶ್ವತ್ಥಪ್ಪರ ಅವರ ಕೊಡುಗೆ ಅಪಾರವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಗ್ರಾಪಂ ಸದಸ್ಯ ಎಸ್.ಜಿ.ದೇವರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಹಳ್ಳಿಯ ಜನರು ಹಬ್ಬ, ಹರಿದಿನ, ಜಾತ್ರೆಗಳಲ್ಲಿ ನಾಟಕಗಳನ್ನು ಆಡುವ ಮೂಲಕ ರಂಗ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಇವುಗಳು ಜನರಿಗೆ ಭಕ್ತಿ, ಭಾವ, ಪ್ರೀತಿ, ಸಹಬಾಳ್ವೆ, ಹಾಗೂ ಭಾವೈಕ್ಯತೆಯನ್ನು ತಂದುಕೊಡುತ್ತವೆ ಎಂದರು.
ಯುವ ಮುಖಂಡ ಎಸ್.ಎನ್.ಗಿರೀಶ್ ಮಾತನಾಡಿ, ನಾಡಿನ ಕಲೆ ಸಂಸ್ಕೃತಿ, ರಂಗಭೂಮಿ ಉಳಿವಿಗೆ ಕಲಾವಿದರು ತಮ್ಮ ಬದುಕನ್ನೇ ಸಮರ್ಪಣೆ ಮಾಡಿದ್ದಾರೆ. ಕರೋನ ನಂತರ ಕಲಾವಿದರ ಬದುಕು ಚಿಂತಾಜನಕವಾಗಿದ್ದು ಅವರ ಬದುಕನ್ನು ಹಸನುಗೊಳಿಸಲು ಸರ್ಕಾರ ಅವರಿಗೆ ಮೂಲಸೌಕರ್ಯ, ಜೀವನ ಭದ್ರತೆ ನೀಡಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.ಈ ವೇಳೆ ಧಾತ್ರಿ ರಂಗಸಂಸ್ಥೆಯ ಕಲಾವಿದರು ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಎಸ್.ಕೆ.ನಾಗರಾಜು ಸಕ್ಕರ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎನ್.ರಘುನಾಥ್, ಮುಖ್ಯ ಶಿಕ್ಷಕರಾದ ಒ.ರಂಗನಾಥ್, ಮುಖಂಡರಾದ ಎಸ್.ಅರ್.ರಂಗನಾಥಪ್ಪ, ಎಸ್.ಡಿ.ರವಿ, ಎಸ್.ಕೆ.ಭೂತೇಶ್, ಎಸ್.ಟಿ.ನಟರಾಜ್, ದ್ವಾರನಕುಂಟೆ ಲೋಕೇಶ್, ಎಸ್.ಆರ್.ರಂಗರಾಜು, ಎಸ್.ಟಿ.ದೇವೇಂದ್ರ, ಧಾತ್ರಿ ರಂಗಸಂಸ್ಥೆಯ ಕಲಾವಿದರಾದ ವಿಜಯಕುಮಾರ್, ಅಂಬರೀಷ್, ಆಶೀಫ್, ಸುಮಿತ್ರ, ರಮೇಶ್, ಕಾವ್ಯ, ಅರವಿಂದ್, ಭೀಮೇಶ್, ಸುಮಂಗಲ ಮುಂತಾದವರು ಉಪಸ್ಥಿತರಿದ್ದರು.