ಶಿಕ್ಷಣ ಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ

| Published : Mar 19 2025, 12:37 AM IST

ಶಿಕ್ಷಣ ಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರೆಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಶಾಸಕ ಕೆ. ಷಡಕ್ಷರಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರೆಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಶಾಸಕ ಕೆ. ಷಡಕ್ಷರಿ ವಿದ್ಯಾರ್ಥಿಗಳಿಗೆ ತಿಳಿಸಿದರು. ತಾಲೂಕಿನ ಗಂಗನಘಟ್ಟ ಶ್ರೀರಂಗ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು ಇದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ರಾಜ್ಯದ ಮಠಮಾನ್ಯಗಳು ಪ್ರಾಧಾನ್ಯತೆ ನೀಡುವ ಮೂಲಕ ಸರ್ಕಾರಕ್ಕೆ ಒತ್ತಡ ಕಡಿಮೆಗೊಳಿಸಿವೆ. ಗ್ರಾಮೀಣ ಭಾಗದಲ್ಲಿ ಸರ್ಕಾರದ ಆಶಯದಂತೆ ಶಿಕ್ಷಣ ಸಂಸ್ಥೆ ತೆರೆದು ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ವೈದ್ಯ ವಿವೇಚನರವರ ಕಾರ್ಯ ಶ್ಲಾಘನೀಯ ಎಂದರು. ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಕೊರತೆ ಇದ್ದು ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳಿಗೆ ಸಮನಾಗಿ ಪರಿಣಿತಿ ಹೊಂದಿದ್ದು ಈ ವಿದ್ಯಾಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು. ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಮಾತನಾಡಿ, ಪ್ರತಿ ತಾಯಿಯ ಆಸೆ ಮತ್ತು ಆಕಾಂಕ್ಷೆ ಮಕ್ಕಳು ಓದಿ ವಿದ್ಯಾವಂತರಾಗಿ ಸಮಾಜ ಸೇವೆಮಾಡಿ ಕೀರ್ತಿ ಸಂಪಾದಿಸಲಿ ಎಂಬುದಾಗಿರುತ್ತದೆ. ವೈದ್ಯ ವಿವೇಚನ್ ಅವರ ತಾಯಿ ಆಸೆಯಂತೆ ಗ್ರಾಮೀಣ ಭಾಗದಲ್ಲಿ ಶಾಲೆ ತೆರೆದು ನನಸು ಮಾಡಿದ್ದಾರೆ. ವೈದ್ಯಕೀಯ ವೃತ್ತಿ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಇಡಿ ಸಮಾಜಕ್ಕೆ ಬೆಳಕಾಗಿದ್ದಾರೆಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಡಾ.ವಿವೇಚನ್ ಮಾತನಾಡಿ ತಾಯಿ ಆಸೆಯಂತೆ ಹುಟ್ಟೂರಿನಲ್ಲಿ ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಪೋಷಕರು ಶಾಲೆಯ ಮೇಲೆ ಜವಾಬ್ದಾರಿ ವಹಿಸಿದ್ದೇನೆಂದು ಸುಮ್ಮನಿರಬಾರದು. ಮಕ್ಕಳ ಚಲನವಲನಗಳನ್ನು ಗಮನಿಸಬೇಕು. ಟಿವಿ ಮತ್ತು ಮೊಬೈಲ್ ನಿಂದ ದೂರವಿರಿಸಬೇಕು. ನಮ್ಮ ಶಾಲೆಯಲ್ಲಿ ನಗರ ಶಾಲೆಗಳಿಗೆ ಸಮನಾಗಿ ಕಂಪ್ಯೂಟರ್ ಶಿಕ್ಷಣ, ಪರಿಣಾಮಕಾರಿ ಕಲಿಕೆ ಉಪಕರಣ, ಸ್ಮಾರ್ಟ್ ಬೋರ್ಡ್ ತರಗತಿ, ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿದ್ದು ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದರು. ಈ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು ಗ್ರಾಮೀಣ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮಕ್ಕಳು ಗ್ರಾಮೀಣ ಭಾಗದ ಕೋಲಾಟ, ಸೋಮನ ಕುಣಿತ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ವೈದ್ಯ ಶ್ರೀಧರ್, ಶ್ರೀರಂಗ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಪ್ರೊ. ಬಸವೇಗೌಡರು, ಕಾರ್ಯದರ್ಶಿ ಮಾಲಿನಿ ವಿವೇಚನ್, ಶಾಲಾ ಶಿಕ್ಷಣ ಉಪನಿರ್ದೇಶಕ ಮನಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ವೀರಾ ಶ್ರೀಧರ್, ಶಾಲಾ ಆಡಳಿತ ಅಧಿಕಾರಿ ಕೃ?ಪ್ಪ ಸೇರಿದಂತೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸಿಬ್ಬಂದಿ ವರ್ಗದವರಿದ್ದರು.