ಸಾರಾಂಶ
ವಿಜಯನಗರ: ಸಂಭ್ರಮದ ಈದ್ ಮಿಲಾದ್ ಹಬ್ಬ ಆಚರಣೆ
ಎಚ್.ಆರ್. ಗವಿಯಪ್ಪಗೆ ಸನ್ಮಾನ । ಹೊಸಪೇಟೆಯಲ್ಲಿ ಭವ್ಯ ಮೆರವಣಿಗೆಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬ ಆಚರಿಸಲಾಯಿತು. ನಗರದಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು. ನಗರದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.ನಗರದಲ್ಲಿ ಶುಕ್ರವಾರ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನದ ನಿಮಿತ್ತ ನಗರದ ಐಎಸ್‌ಆರ್ ರಸ್ತೆಯ ಈದ್ಗಾ ಮೈದಾನದಿಂದ ಭವ್ಯ ಮೆರವಣಿಗೆ ಆರಂಭಿಸಲಾಯಿತು. ಈ ಮೆರವಣಿಗೆ ನಗರದ ಪ್ರಮುಖ ಬೀದಿಗಳಾದ ರಾಮಾ ಟಾಕೀಸ್, ಉದ್ಯೋಗ ಪೆಟ್ರೋಲ್ ಬಂಕ್, ಪುನೀತ್ ರಾಜಕುಮಾರ ವೃತ್ತ, ಬಸ್ ನಿಲ್ದಾಣ, ಮೂರಂಗಡಿ ವೃತ್ತದ ಮೂಲಕ ಮೀರ್ ಆಲಂ ಟಾಕೀಸ್ ಬಳಿ ಧಾರ್ಮಿಕ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಶಾಸಕ ಎಚ್.ಆರ್. ಗವಿಯಪ್ಪ ಪಾಲ್ಗೊಂಡು ಮುಸ್ಲಿಮ ಸಮಾಜದವರಿಗೆ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ಅವರು, ನನ್ನ ರಾಜಕೀಯ, ಸಾಮಾಜಿಕ ಬೆಳವಣಿಗೆಯಲ್ಲಿ ಮುಸ್ಲಿಂ ಸಮಾಜದ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್ ದೊರಕಿಸಿಕೊಟ್ಟಿಲ್ಲದೇ, ಗೆಲ್ಲಿಸಿ ಶಾಸಕರು ಮಾಡಿದ್ದಾರೆ. ಮುಸ್ಲಿಂ ಸಮಾಜದ ಋಣ ನನ್ನ ಮೇಲಿದೆ. ಈ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸುವೆ ಎಂದರು.
ಮುಸ್ಲಿಂ ಧರ್ಮಗುರುಗಳಾದ ಅಬೂಬಕ್ಕರ್, ಅಹ್ಮದ್, ಹುಸೇನ್ , ಇಸ್ಮಾಯಿಲ್ ಮೌಲಾನಾ, ರೋಷನ್ ಜಮೀರ್, ಜಿಲಾನ್, ಖಾಜಿ, ಜಶ್ನೇ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷ ಕೆ. ಬಡಾವಲಿ, ಕಾರ್ಯಾಧ್ಯಕ್ಷ ಸೈಯದ್ ಖಾದರ್ ರಫಾಯಿ, ಮುಖಂಡರಾದ ನಿಸಾರ್, ಶಮ್ಶುದ್ದೀನ್, ಇಮ್ತಿಯಾಜ್, ಇಬ್ರಾಹಿಂ ಖಾನ್, ಸಸ್ತಾರ ಸಾಬ, ಅಲ್ಲಾಭಕ್ಷ, ಜಿಲಾನ್, ರಹಮತ್ ಉಲ್ಲಾ, ಶೇಕ್ ಅಹಮದ್, ಬಾಷಾ, ಮೆಹಬೂಬ್, ಜಾಫರ್, ಮೈನುದ್ದೀನ್, ಮಹಮದ್ ಇಮಾಮ್ ನಿಯಾಜಿ, ದಾದಾಪೀರ್, ಸಯ್ಯದ್ ಮೊಹಮ್ಮದ್, ನಗರಸಭೆ ಸದಸ್ಯರು ಸೇರಿದಂತೆ ಮುಖಂಡರು ಭಾಗವಹಿಸಿದ್ದರು.ಹೊಸಪೇಟೆಯಲ್ಲಿ ಡಿವೈಎಫ್‌ಐ ಸಂಘಟನೆ ವತಿಯಿಂದ ಮುಸ್ಲಿಂ ಬಾಂಧವರಿಗೆ ಸಿಹಿ ಹಂಚಿ ಶುಭಾಶಯ ಕೋರಲಾಯಿತು. ಎಡಿಜಿಪಿ ಎಸ್. ಮುರುಗನ್ ನಗರಕ್ಕೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು. ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ, ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಡಾ. ತಳವಾರ ಮಂಜುನಾಥ ಮತ್ತಿತರರು ಭಾಗವಹಿಸಿದ್ದರು.