ರಾಜ್ಯ, ದೇಶದ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ ಇಲಾಖೆ ಪಾತ್ರ ಹಿರಿದಾಗಿದೆ. ಹಗಲು-ಇರುಳೂ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಕೊಡುಗೆ ಅವಿಸ್ಮರಣೀಯವಾದುದು ಎಂದು ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತೆ ರೇಣುಕಾ ಶ್ಲಾಘಿಸಿದ್ದಾರೆ.

- ದೂಡಾ ಆಯುಕ್ತೆ ರೇಣುಕಾ ಶ್ಲಾಘನೆ । ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

- - -

ಕನ್ನಡಪ್ರಭ ವಾರ್ತೆ ದಾವಣಗರೆ

ರಾಜ್ಯ, ದೇಶದ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ ಇಲಾಖೆ ಪಾತ್ರ ಹಿರಿದಾಗಿದೆ. ಹಗಲು-ಇರುಳೂ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಕೊಡುಗೆ ಅವಿಸ್ಮರಣೀಯವಾದುದು ಎಂದು ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತೆ ರೇಣುಕಾ ಶ್ಲಾಘಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಬುಧವಾರ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಅವರು ಮಾತನಾಡಿದರು. ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗದಿದ್ದರೂ, ಅತ್ಯಂತ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸೇವೆಯನ್ನು ನಾವ್ಯಾರೂ ಮರೆಯಬಾರದು ಎಂದರು.

ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿದ್ದು, ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ತುಲ ರಸ್ತೆ ಸೇರಿದಂತೆ ನಗರ ಸಂಚಾರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೈ ಜೋಡಿಸಿ ಶ್ರಮಿಸುತ್ತಿದೆ. ದೇಶ ರಕ್ಷಣೆಗಾಗಿ ಪ್ರಾಣತೆತ್ತ ವೀರಯೋಧರನ್ನು ಸ್ಮರಿಸುವ ದಿನ ಇದಾಗಿದೆ. ದೇಶದಲ್ಲಿ 154 ಹಾಗೂ ಕರ್ನಾಟಕದಲ್ಲಿ 5 ವೀರಯೋಧರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ, ಗಣೇಶ ವಿಸರ್ಜನಾ ಶೋಭಾಯಾತ್ರೆ, ಈದ್ ಮಿಲಾದ್ ಮೆರವಣಿಗೆ ಇತರೆ ಹಬ್ಬಗಳು, ಸಾರ್ವಜನಿಕ ಸಭೆ, ಸಮಾರಂಭಗಳನ್ನು ಯಾವುದೇ ಅಡಚಣೆ ಇಲ್ಲದೇ, ಶಾಂತಿ- ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುವಲ್ಲಿ ಪೊಲೀಸ್ ಇಲಾಖೆ ಪಾತ್ರ ಹಿರಿದು. ಬೀದಿ ಬದಿ ವ್ಯಾಪಾರಿಗಳ ಸಂಘ, ಆಟೋ ಚಾಲಕರ ಸಂಘ, ಕಾಲೋನಿಗಳಲ್ಲಿ ಕಾನೂನು-ಸುವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೇವಲ ಕಾನೂನು ರಕ್ಷಣೆ ಮಾತ್ರವಲ್ಲದೇ, ಜನಸ್ನೇಹಿ ಆಡಳಿತಕ್ಕೂ ಪೊಲೀಸ್ ಇಲಾಖೆ ಮುನ್ನುಡಿ ಬರೆದಿದೆ. ಪೊಲೀಸ್ ಇಲಾಖೆ 24 ಗಂಟೆಯೂ ಸಾರ್ವಜನಿಕರ ರಕ್ಷಣೆಗೆ ಸದಾ ಸಿದ್ಧವಿದ್ದು, ಸಾರ್ವಜನಿಕರೂ ಇಲಾಖೆ ಜೊತೆಗೆ ಸಹಕರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕು ಎಂದು ದೂಡಾ ಆಯುಕ್ತೆ ರೇಣುಕಾ ಶ್ಲಾಘಿಸಿದರು.

ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಎನ್.ಸತೀಶಕುಮಾರ ಮಾತನಾಡಿ, ಸುರಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಪೊಲೀಸರ ಪಾತ್ರ ಹಿರಿದಾಗಿದೆ. ಕರ್ತವ್ಯದ ವೇಳೆ ಜೀವ ತ್ಯಾಗ ಮಾಡಿದ ಹಾಗೂ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿ ತ್ಯಾಗ-ಬಲಿದಾನ ಸ್ಮರಣೀಯವಾದುದು. ಪೊಲೀಸರು ತಮ್ಮ ಜೀವ ತ್ಯಾಗ ಮಾಡುವ ಜೊತೆಗೆ ಬದುಕಿರುವಾಗಲೂ ಸಮಾಜಕ್ಕಾಗಿ ಅಪಾರ ತ್ಯಾಗಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.

ಸರ್ವಿಸ್ ಬಿಫೋರ್ ಸೆಲ್ಫ್ (ಸ್ವಾರ್ಥಕ್ಕೂ ಮುನ್ನ ಸೇವೆ) ಎನ್ನುವ ತತ್ವವೇ ಪೊಲೀಸ್ ಪಡೆ ಮೂಲಮಂತ್ರವಾಗಿದೆ. ಹಿಂದಿನ ದಶಕಗಳಲ್ಲಿ ಇದ್ದಂತಹ ಆಂತರಿಕ ಗೊಂದಲಗಳು, ನಕ್ಸಲಿಸಂ, ಭಯೋತ್ಪಾದನೆ ಹಾಗೂ ಕೋಮು ಗಲಭೆಗಳಂತಹ ಸವಾಲುಗಳನ್ನು ಎದುರಿಸಿ ಇಂದು ದೇಶವನ್ನು ಒಂದು ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ಸ್ಥಿತಿಗೆ ತರಲು ಪೊಲೀಸ್ ಸಿಬ್ಬಂದಿ ತ್ಯಾಗವೂ ಕಾರಣವಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಬಸವರಾಜ, ಕೃಷ್ಣಮೂರ್ತಿ, ಬಿ.ಶರಣ ಬಸವೇಶ್ವರ, ಪೊಲೀಸ್ ನಿರೀಕ್ಷಕರು, ಸಬ್ ಇನ್ಸಪೆಕ್ಟರ್‌ಗಳು, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.

- - -

(ಬಾಕ್ಸ್‌)

* ಚೀನಾ ಸೈನಿಕರು ನಮ್ಮ ಮೇಲೆ ದಾಳಿ ಮಾಡಿದ್ದರು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ ಮಾತನಾಡಿ, 21.10.1953ರಂದು ಸಿಆರ್‌ಪಿಎಫ್‌ನ ಡಿಎಸ್ಪಿ ಕರಣ್ ಸಿಂಗ್ ನೇತೃತ್ವದ ಸಿಆರ್‌ಪಿಎಫ್‌ ತುಕುಡಿ ಲಡಾಖ್ ಪ್ರದೇಶದ ಹಾಟ್ ಸ್ಪ್ರಿಂಗ್ ಹತ್ತಿರ ಗಸ್ತು ಮಾಡುವಾಗ ಅವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಸೈನಿಕರು ನಮ್ಮ ಸಿಆರ್‌ಪಿಎಫ್ ತುಕಡಿ ಮೇಲೆ ದಾಳಿ ಮಾಡುತ್ತಾರೆ. ನಮ್ಮ ಜವಾನರ ಬಳಿ ಕೇವಲ ಸಾಮಾನ್ಯ ಬಂದೂಕಿದ್ದು, ಶತೃ ಸೈನಿಕರು ಸುಸಜ್ಜಿತ ಮದ್ದು ಗುಂಡು, ಆಯುಧಗಳನ್ನು ಹೊಂದಿದ್ದರೂ ಭಾರತದ ಜವಾನರು ಧೈರ್ಯ, ಸಾಹಸದಿಂದ ಚೀನಾ ಸೈನಿಕರೊಂದಿಗೆ ವೀರಾವೇಶದಿಂದ ಹೋರಾಡುತ್ತಾರೆ ಎಂದು ಹೇಳಿದರು. ಅಂದಿನ ಹೋರಾಟದಲ್ಲಿ 10 ಸಿಆರ್‌ಪಿಎಫ್ ಜವಾನರು ವೀರಮರಣ ಹೊಂದಿದ್ದು, 9 ಜವಾನರನ್ನು ಚೀನಾ ಸೈನಿಕರು ದಸ್ತಗಿರಿ ಮಾಡಿರುತ್ತಾರೆ. ನಮ್ಮ ಸಿಆರ್‌ಪಿಎಫ್‌ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತದ ಎಲ್ಲ ಪ್ರಜೆಗಳು ಸ್ಮರಿಸುತ್ತಾರೆ. ದೇಶಕ್ಕಾಗಿ ಹೋರಾಡಿ ವೀರಸ್ವರ್ಗ ಪಡೆದ ಶೂರರ ಸ್ಮರಣೆಗೆ ಲಡಾಖ್‌ನಲ್ಲಿ ಅಬಾಸಿಚಿನ್ ಭಾಗದಲ್ಲಿ 18 ಸಾವಿರ ಅಡಿ ಅಡಿ ಎತ್ತರದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

- - -

(ಕೋಟ್‌)

ಕರ್ತವ್ಯ ಪಾಲನೆಯಲ್ಲಿ ಪ್ರತಿವರ್ಷ ದೇಶದಲ್ಲಿ ಅನೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತಹವರ ಸ್ಮರಣೆಗಾಗಿ ಪ್ರತಿವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. 1.9.2025ರಿಂದ 31.8.2026ರವರೆಗೆ ದೇಶದಲ್ಲಿ ಕರ್ತವ್ಯ ಪಾಲನೆಯಲ್ಲಿ ಒಟ್ಟು 154 ಪೊಲೀಸ್ ಅಧಿಕಾರಿ, ಸಿಬ್ಬಂದಿ ವೀರ ಮರಣ ಹೊಂದಿದ್ದಾರೆ. ರಾಜ್ಯದ ಪೊಲೀಸ್ ನಿರೀಕ್ಷಕ ಪಚ್ಚಯ್ಯ ವೀರಯ್ಯ ಸಾಲಿಮಠ, ಉಪ ನಿರೀಕ್ಷಕ ಎಂ.ಎಸ್. ಬಸವರಾಜ, ಮುಖ್ಯ ಪೇದೆಗಳಾದ ಬೀರಲಿಂಗ, ಎ.ಎಂ.ಸಾಲಿಮಠ, ಇಸ್ಮಾಯಿಲ್ ಹೀಗೆ ಐವರು ಹುತಾತ್ಮರಾಗಿದ್ದಾರೆ.

- ಡಾ.ಎಚ್.ಟಿ.ಶೇಖರ, ಜಿಲ್ಲಾ ಎಸ್‌ಪಿ.

- - -

-21ಕೆಡಿವಿಜಿ1, 2: ದಾವಣಗೆರೆಯಲ್ಲಿ ಬುಧವಾರ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ದೂಡಾ ಆಯುಕ್ತೆ ರೇಣುಕಾ ಪುಷ್ಪಗುಚ್ಛ ಅರ್ಪಿಸಿದರು.