ಕನಕಪುರ: ಭೂಮಂಡಲದಲ್ಲಿ ರಾಕ್ಷಸರ ಉಪಟಳವನ್ನು ತಾಳಲಾರದೆ ಋಷಿಮುನಿಗಳು ದೇವಾನುದೇವತೆಗಳ ಬೇಡಿಕೆಯಂತೆ ಕ್ಷತ್ರಿಯರು ಮಾಡಿದ ಯಾಗದ ಅಗ್ನಿಕುಂಡದಲ್ಲಿ ಜನಿಸಿದವರು ಅಗ್ನಿಬನ್ನಿರಾಯಸ್ವಾಮಿ ಎಂದು ತಿಗಳ ಸಮಾಜದ ಮುಖಂಡ ಶ್ರೀನಿವಾಸ್ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಅಗ್ನಿಬನ್ನಿರಾಯ ಸ್ವಾಮಿಗೆ ಸಂಬಂಧಿಸಿದಂತೆ ಉತ್ತರ ಭಾರತ ಪರಮಾರರ ಶಾಸನಗಳಲ್ಲಿ ಯಾಗ ಕುಂಡದಿಂದ ಕ್ಷತ್ರಿಯ ಸಮಾಜದ ಪ್ರತಿನಿಧಿಯಾಗಿ ಉದಯಿಸಿದ ಅಗ್ನಿಬನ್ನಿರಾಯರ ಉಲ್ಲೇಖದಲ್ಲಿ ತಿಳಿಸಿದಂತೆ ಪುರಾಣದಲ್ಲಿ ಸಿಕ್ಕ ಮಾಹಿತಿಯಲ್ಲೂ ಅಲ್ಪಸ್ವಲ್ಪ ವ್ಯತ್ಯಾಸ ಬಿಟ್ಟರೆ ಉಳಿದಂತೆ ಎಲ್ಲವೂ ಒಂದೇ ಧ್ವನಿಯನ್ನು ಬಿಂಬಿಸುತ್ತಿದೆ ಎಂದರು.

ಧಮ್ಮದೀವಿಗೆ ಟ್ರಸ್ಟ್‌ ಮಲ್ಲಿಕಾರ್ಜುನ್ ಮಾತನಾಡಿ, ಐತಿಹಾಸಿಕ, ಪೌರಾಣಿಕ ಹಾಗೂ ಚರಿತ್ರಗಳಲ್ಲಿ ಉಲ್ಲೇಖಸಿದ್ದನ್ನು ನೋಡಿ ಹೇಳುವುದಾದರೆ ಮಹಾಭಾರತ ಸೇರಿದಂತೆ ಹಲವು ಪುರಾಣಗಳಲ್ಲಿ ಹೇಳುವುದಾದರೆ ತಿಗಳ ಸಮುದಾಯ ಈ ದೇಶಕ್ಕೆ ಮಹಾನ್ ಕೊಡುಗೆ ನೀಡಿದೆ ಎಂದರು.

ಬೆಂಗಳೂರಿನಲ್ಲಿ ವಿಶ್ವ ಪರಂಪರಾಗತ ಕರಗ ಮಹೋತ್ಸವ ಪ್ರಾರಂಭಿಸಿ ನಾಡಪ್ರಭು ಕೆಂಪೇಗೌಡರು ದ್ರೌಪತಮ್ಮ ಕರಗ ಮಹೋತ್ಸವ ಕಟ್ಟಿ ತಿಗಳರ ಪೇಟೆಯನ್ವು ಕಟ್ಟಿ ಬೆಂಗಳೂರು ಮಹಾನಗರದ ಮುಖ್ಯ ಕೇಂದ್ರದಲ್ಲಿ ಅವರ ಸಮುದಾಯವನ್ನು ಮುಂಚೂಣಿಗೆ ತರುವ ಕೆಲಸ ಮಾಡಿದ್ದು ಅವರ ಸಾಧನೆ ಹಾಗೂ ಜನಪರ ಕಾರ್ಯಗಳನ್ನು ತಿಳಿಸುವ ಕೆಲಸ ನಾಡಿನ ಇತಿಹಾಸಕಾರರು ಮಾಡಬೇಕಾಗಿದೆ ಎಂದರು.

ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಸುಸ್ಥಿರ ಸಮಾಜ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಅಸ್ಥಿರತೆಯಿಂದ ನಲುಗುತ್ತಿದೆ. ಇದಕ್ಕೆ ಕಾರಣ ಸಮುದಾಯದಲ್ಲಿ ಸಂಘಟನೆಯ ಕೊರತೆ. ಸಮುದಾಯದ ಭೌತಿಕ ಅಸಮಾನತೆಯನ್ನು ತೊಡೆದುಹಾಕಲು ಸಂಘಟನೆಯಿಂದ ಮಾತ್ರ ಸಾಧ್ಯವಾಗಲಿದ್ದು ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನರಿರುವ ಈ ಸಮುದಾಯ ರಾಜ್ಯದ ಸುಮಾರು 70 ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವುದು ಗಮನಾರ್ಹ. ಅಂತಹ ಸಮುದಾಯ ರಾಜಕೀಯ ಅಸಮಾನತೆಯಿಂದ ನರಳುತ್ತಿರುವುದು ವಿಪರ್ಯಾಸ ಎಂದರು.


ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ರಘು, ತಿಗಳ ಅಭಿವೃದ್ಧಿ ಸಂಘದ ಖಜಾಂಚಿ ಕುಮಾರ್, ತಾಲೂಕು ಸಂಘದ ಅಧ್ಯಕ್ಷ ರಾಜೀವ್, ಸಮುದಾಯದ ಮುಖಂಡರಾದ ರಮೇಶ್, ಚಿಕ್ಕಮರಿ ಗೌಡ, ಚಿಕ್ಕಸ್ವಾಮಿ, ತಮ್ಮಯ್ಯ, ಪುಟ್ಟಸ್ವಾಮಿ ರಾಜು, ಸಾಹಿತಿ ಕೂಗಿ ಗಿರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ್ ಇತರರು ಹಾಜರಿದ್ದರು.

(ಫೋಟೋ ಕ್ಯಾಫ್ಷನ್)

ಕನಕಪುರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.