ಸಾರಾಂಶ
ಯಲಬುರ್ಗಾದ ಪಟ್ಟಣದಲ್ಲಿ ಶುಕ್ರವಾರ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳ ೨೩ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಸಾಮೂಹಿಕ ವಿವಾಹ ಮತ್ತು ಧರ್ಮಸಭೆ ನಡೆಯಿತು.
ಯಲಬುರ್ಗಾ: ನಾಡಿನುದ್ದಕ್ಕೂ ವೀರಶೈವ ಮಠ-ಮಂದಿರಗಳು ಧಾರ್ಮಿಕ, ಶೈಕ್ಷಣಿಕ, ಅನ್ನದಾಸೋಹಕ್ಕೆ ಮುಂದಿವೆ. ಭಕ್ತಾಧಿಗಳು ಮಠಗಳ ಶ್ರಯೋಭಿವೃದ್ಧಿಗಾಗಿ ಸದಾ ಶ್ರಮಿಸಬೇಕು ಎಂದು ಮಸೂತಿಯ ಜಗದೀಶ್ವರ ಹಿರೇಮಠದ ಶ್ರೀ ಪ್ರಭುಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳ ೨೩ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಸಾಮೂಹಿಕ ವಿವಾಹ ಮತ್ತು ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶ್ರೀಧರ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಶ್ರೀಗಳ ಸಮಾಜಮುಖಿ ಕಾರ್ಯ ಇತರ ಮಠಮಾನ್ಯಗಳಿಗೆ ಮಾದರಿಯಾಗಿದೆ ಎಂದರು.
ನವ ದಂಪತಿ ಜೀವನದಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯಗಳು ಬಂದರೂ ಅವುಗಳನ್ನು ಸಮವಾಗಿ ಸ್ವೀಕರಿಸಿ ತಂದೆ-ತಾಯಿ,ಅತ್ತೆ-ಮಾವರನ್ನು ಸದಾ ಪ್ರೀತಿ, ವಿಶ್ವಾಸದಿಂದ ಕಾಣುವ ಮನೋಭಾವ ಬೆಳೆಸಿಕೊಂಡು ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಬಾಳಬೇಕು. ಶ್ರೀ ಮಠ ಭಕ್ತಿ-ಭಾವ, ಶಿಕ್ಷಣ, ದಾಸೋಹ, ಧಾರ್ಮಿಕತೆಯಿಂದ ಕೂಡಿದೆ. ಜತೆಗೆ ಗೋವುಗಳ ಸಂಕ್ಷರಣೆ, ಯೋಗ ಪಟುಗಳಾಗಿ ಎಲ್ಲ ಭಕ್ತಾದಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಭಕ್ತರು ತನು, ಮನ-ಧನದಿಂದ ಮಾಡಿದ ತುಲಾಭಾರದ ಸಂಪೂರ್ಣ ಹಣವನ್ನು ಮಠದ ಅಭಿವೃದ್ಧಿಗಾಗಿ ಸದುಪಯೋಗ ಮಾಡಲಾಗುವುದು. ಶ್ರೀಮಠ ಇಷ್ಟೊಂದು ಬೆಳೆಯಲು ಸಕಲ ಸದ್ಭಕ್ತರ ಹಗಲಿರುಳು ಪರಿಶ್ರಮವೇ ಇದಕ್ಕೆ ಕಾರಣವಾಗಿದೆ. ಪ್ರತಿವರ್ಷ ಅದ್ಧೂರಿ ಪೀಠಾರೋಹಣ ಆಚರಿಸುವ ಮೂಲಕ ಎಲ್ಲರೂ ಕೈಜೋಡಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕಳೆದ ೯ ದಿನಗಳಿಂದ ನಾನಾ ಮಠಾಧೀಶರು ಆಗಮಿಸಿ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ನಡೆಯಬೇಕು ಎಂದರು.
ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಮುರಘಾ ಮಠದ ಕಾಶೀನಾಥ ಸ್ವಾಮೀಜಿ, ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಡಾ. ಮಹಾದೇವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ವೇಳೆಯಲ್ಲಿ ವೀರಣ್ಣ ಹುಬ್ಬಳ್ಳಿ, ಬಸಲಿಂಗಪ್ಪ ಕೊತ್ತಲ, ಶರಣಪ್ಪ ಭೂತೆ, ಶಂಕರ್ ಕಲ್ಬುರ್ಗಿ, ಅಡಿವೆಯ್ಯ ಕಲ್ಯಾಣಮಠ, ಮಹೇಶ ಹುಬ್ಬಳ್ಳಿ, ಈಶಪ್ಪ ಸ್ಟಾಂಪಿನ್ ಇದ್ದರು.