ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ದೇಶದಲ್ಲಿ ಕೃಷಿಯಿಂದ ಹಿಡಿದು ಪ್ರತಿಯೊಂದು ಕೆಲಸಗಳಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮುಖ್ಯವಾಗಿದ್ದು, ಅವರ ಕೊಡುಗೆ ಅಪಾರ ಎಂದು ಶಾಸಕರಾದ ಸ್ವರೂಪ ಪ್ರಕಾಶ್ ತಿಳಿಸಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಲೆ, ಸಂಸ್ಕೃತಿಯ ಪ್ರತೀಕವಾದ ಹಳೇಬೀಡು, ಬೇಲೂರು, ಶ್ರವಣಬೆಳಗೊಳ ಎಂದ ಅವರು, ದೇಶ ವಿದೇಶಗಳಲ್ಲಿಯೂ ಶಿಲ್ಪಕಲೆಗಳಿಗೆ ಬೇಡಿಕೆ ಇದೆ. ವಿಶ್ವಕರ್ಮ ಸಮುದಾಯದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.
ವಿಶ್ವಕರ್ಮ ವೃತ್ತ ಎಂದು ಚಂದ್ರಶೇಖರ್ ಅವರು ನಾಮಕರಣ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಒಂದು ಕಂಚಿನ ಪ್ರತಿಮೆಯನ್ನು ಮಾಡಿ ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಬೇಕು ಪ್ರತಿಯೊಂದು ಸಮುದಾಯ ತಮ್ಮಲ್ಲಿರುವ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.ನಗರಸಭೆಯ ಅಧ್ಯಕ್ಷರಾದ ಚಂದ್ರೇಗೌಡ ಎಂ ಅವರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ವಿಶ್ವಕರ್ಮ ಜನಾಂಗದವರು ಮಾಡದೆ ಇರುವ ಕಸುಬು ಇಲ್ಲ. ಜಗತ್ತಿನ ಎಲ್ಲಾ ಕಸುಬುದಾರರಿಗೂ ಎಲ್ಲ ಸಮುದಾಯಕ್ಕೂ ಬೇಕಾದವರು ವಿಶ್ವಕರ್ಮರು, ಬಹುಮುಖ್ಯವಾಗಿ ಉಪಯುಕ್ತವಾದ ಸಮಾಜಮುಖಿ ಕೆಲಸ ಮಾಡುವವರೇ ವಿಶ್ವಕರ್ಮರು ಎಂದು ತಿಳಿಸಿದರು.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪುರುಷೋತ್ತಮ ಎಚ್ ವಿ ಅವರು ಮಾತನಾಡಿ, ವಿಶ್ವಕರ್ಮನನ್ನು ಬ್ರಹ್ಮಾಂಡದ ದೈವಿಕ ವಾಸ್ತುಶಿಲ್ಪಿ ಮತ್ತು ಋಗ್ವೇದದಲ್ಲಿ ದೈವಿಕ ಸೃಜನಶೀಲತೆಯ ವ್ಯಕ್ತಿತ್ವ ಎಂದು ಪರಿಗಣಿಸಲಾಗಿದೆ. ಕೃಷ್ಣನಿಗೆ ದ್ವಾರಕ ನಗರವನ್ನು, ಪಾಂಡವರಿಗೆ ಇಂದ್ರಪ್ರಸ್ಥದ ಅರಮನೆಯನ್ನು ಮತ್ತು ದೇವತೆಗಳಿಗೆ ವಿಷ್ಣುವಿನ ಸುದರ್ಶನ ಚಕ್ರ ಶಿವನ ತ್ರಿಶೂಲ ಮತ್ತು ಕಾರ್ತಿಕೇಯನ ಭರ್ಜಿಯಂತಹ ಅನೇಕ ಅಸಾಧಾರಣ ಆಯುಧಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಋಗ್ವೇದದ ಕೆಲವು ಭಾಗಗಳ ಪ್ರಕಾರ ವಿಶ್ವಕರ್ಮನು ಅಂತಿಮ ವಾಸ್ತವದ ವ್ಯಕ್ತಿತ್ವ, ದೇವತೆಗಳಲ್ಲಿ ಅಂತರ್ಗತವಾಗಿರುವ ಅಮೂರ್ತ ಸೃಜನಶೀಲ ಶಕ್ತಿ, ಈ ವಿಶ್ವದಲ್ಲಿ ಜೀವಂತ ಮತ್ತು ನಿರ್ಜೀವ ಜೀವಿ. ಅವನು ಐದನೇ ಏಕದೇವತಾವಾದಿ ದೇವರ ಪರಿಕಲ್ಪನೆ ಎಂದು ಪರಿಗಣಿಸಲ್ಪಟ್ಟಿದ್ದಾನೆ. ಋಗ್ವೇದದ ನಂತರದ ಭಾಗಗಳು ವಾಸ್ತುಶಿಲ್ಪಿಯ ಮೂಲದ ಬಗ್ಗೆ ರಹಸ್ಯಗಳಿಗೆ ತೃಪ್ತಿದಾಯಕ ಉತ್ತರವನ್ನು ಹುಡುಕುವ ಪ್ರಯತ್ನಗಳನ್ನು ಬಹಿರಂಗಪಡಿಸುತ್ತವೆ. ಋಗ್ವೇದದ ಈ ಭಾಗಗಳಲ್ಲಿ ಇರುವ ಸೃಷ್ಟಿ ಸ್ತೋತ್ರಗಳು ದೇವರು ಮತ್ತು ಅವರ ಮುಖ್ಯಸ್ಥರ ಸಂಗ್ರಹಕ್ಕೆ ವಿರುದ್ಧವಾಗಿ ಪ್ರತ್ಯೇಕ ಸೃಷ್ಟಿಕರ್ತ ದೇವರನ್ನು ಉಲ್ಲೇಖಿಸುತ್ತವೆ. ಇಂದ್ರ, ವರುಣ, ಅಗ್ನಿ ವಾಸ್ತುಶಿಲ್ಪವನ್ನು ರಚಿಸುವುದು ಎಂದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಈ ಕೃಷ್ಣೇಗೌಡ ಅವರು ಮಾತನಾಡಿ, ನಮ್ಮ ದೇಶದ ಬೆಳವಣಿಗೆಯಲ್ಲಿ ಉತ್ತಮವಾದ ಸಂಸ್ಕಾರ ಕೊಡುವುದೇ ವಿಶ್ವಕರ್ಮ ಸಮಾಜ. ಒಬ್ಬ ಕೂಲಿ ಕಾರ್ಮಿಕರಿಗೆ ರೈತರಿಗೆ ಎಲ್ಲರಿಗೂ ಅವರದ್ದೇ ಆದಂತಹ ಆಯುಧಗಳನ್ನು ಮಾಡಿಕೊಡುವವರೆ ವಿಶ್ವಕರ್ಮರು. ದೇಶದ ಬೆಳವಣಿಗೆಯಲ್ಲಿ ವಿಶ್ವಕರ್ಮ ಸಮಾಜದ ಅಪಾರ ಕೊಡುಗೆ ಇದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್ ಪಿ ತಾರಾನಾಥ್, ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಜಿ ಕುಮಾರ್, ಹಾಸನ ತಾಲೂಕಿನ ವಿಶ್ವಕರ್ಮ ಸಮಾಜ ಅಧ್ಯಕ್ಷರಾದ ಎಚ್ ಬಿ ಕುಮಾರಾಚಾರ್ ಮತ್ತಿತರರು ಉಪಸ್ಥಿತಿಯಲ್ಲಿದ್ದರು.