ಕನಕದಾಸರು ಮತ್ತು ಪುರಂದರದಾಸರು ಭವದತಮದಿಂದ (ಸಂಸಾರದ ಅಜ್ಞಾನದ ಕತ್ತಲೆಯಿಂದ) ಭಕ್ತಿಯ ಬೆಳಕಿನೆಡೆಗೆ ಸಮಾಜವನ್ನು ಮುನ್ನೆಡೆಸಿದ ಎರಡು ಪ್ರಮುಖ ಕಣ್ಣುಗಳಾಗಿದ್ದರು

ರಾಣಿಬೆನ್ನೂರು: ಕರ್ನಾಟಕದ ಭಕ್ತಿ ಚಳುವಳಿಯ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕನಕದಾರು ಮತ್ತು ಪುರಂದರದಾಸರ ಕೊಡುಗೆ ಅನನ್ಯವಾದುದು ಎಂದು ಚಿಕ್ಕಬಾಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಪುಷ್ಪಾವತಿ ಶೆಲವಡಿಮಠ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕನಕ ಪುರಂದರ ಭವದತಮದಿಂದ ಭಕ್ತಿಯ ಬೆಳಕಿನೆಡೆಗೆ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕನಕದಾಸರು ಮತ್ತು ಪುರಂದರದಾಸರು ಭವದತಮದಿಂದ (ಸಂಸಾರದ ಅಜ್ಞಾನದ ಕತ್ತಲೆಯಿಂದ) ಭಕ್ತಿಯ ಬೆಳಕಿನೆಡೆಗೆ ಸಮಾಜವನ್ನು ಮುನ್ನೆಡೆಸಿದ ಎರಡು ಪ್ರಮುಖ ಕಣ್ಣುಗಳಾಗಿದ್ದರು. ಅವರು ತಮ್ಮ ಕೀರ್ತನೆಗಳ ಮೂಲಕ ಮಾನವ ಕುಲವನ್ನು ಲೌಕಿಕ ಜಂಜಾಟಗಳಿಂದ ಮುಕ್ತಗೊಳಿಸಿ ಭಗವಂತನ ಭಕ್ತಿಯೆಂಬ ಪರಮ ಬೆಳಕಿನೆಡೆಗೆ ಮುನ್ನಡೆಸಿದರು. ದಾಸರು ಬಾಳಿದ ಕಾಲದಲ್ಲಿ ಸಮಾಜವು ಕೇವಲ ಬಾಹ್ಯ ಆಡಂಬರ, ಜಾತಿ ಪದ್ಧತಿ, ಅಶ್ಪೃಶ್ಯತೆ ಮತ್ತು ಭೋಗ ಜೀವನದಲ್ಲಿ ಮುಳುಗಿತ್ತು. ಕೆರೆಗಳ ತೋಡಿಸಿ ಬಾವಿ ಅಗೆಸಿದರೆ ಧರ್ಮವೆ ಎಂದು ಪುರಂದರದಾಸರು ಮತ್ತು ಕುಲಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಬಾಹ್ಯ ಆಡಂಬರ ಹಾಗೂ ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದರು. ಮನಸ್ಸಿನ ಶುದ್ಧತೆಯೇ ನಿಜವಾದ ಭಕ್ತಿಯ ಬೆಳಕು ಎಂಬುದನ್ನು ಸಾರಿದರು ಎಂದು ತಿಳಿಸಿದರು.

ಪ್ರಾ. ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಸಾಯಿಲತಾ ಎಂ, ಪ್ರೊ. ನಾಗರಾಜ ಗವಿಯಪ್ಪನವರ, ಕವಿತಾ ಪೋಲೀಸಗೌಡರ, ಪ್ರೊ.ಶೋಭಾ ದೊಡ್ಡನಾಗಳ್ಳಿ, ನೀಲಾಂಬಿಕಾ ಹರವಿ, ಅಶ್ವಿತಾ, ಸೋನಿಯಾ, ಕಾವ್ಯಾ, ಮಂಜುಳಾ ಮುಧೋಳಕರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.