ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

| Published : Sep 24 2024, 01:46 AM IST

ಸಾರಾಂಶ

ಬಸವಕಲ್ಯಾಣ ತಹಸೀಲ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ಸಾರ್ವಜನಿಕರ ಕೊಂದುಕೊರತೆ ಆಲಿಸಿ ಅಹವಾಲು ಸ್ವೀಕಾರ್ಯ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ತಹಸೀಲ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಕೊಂದುಕೊರತೆ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಕೆಲ ಅರ್ಜಿಗಳನ್ನು ತಕ್ಷಣ ಇತ್ಯರ್ಥ ಪಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಯಿತು.

ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ಆಗುತ್ತಿರುವ ಸಮಸ್ಯೆ, ಕಳಪೆ ರಸ್ತೆ ಕಾಮಗಾರಿ ಇತರ ವಿಷಯಗಳ ಕುರಿತು ಜನರ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರ ಸಹಕಾರ ಬೇಕು. ಯಾವುದೇ ಕೆಲಸಕ್ಕೆ ಯಾರೇ ಲಂಚದ ಬೇಡಿಕೆ ಇಟ್ಟರು ದೂರು ನೀಡಲು ಜನ ಮುಂದಾದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅರ್ಜಿ ವಿಲೇವಾರಿಗೆ ಅನಗತ್ಯ ವಿಳಂಬ ಮಾಡಬಾರದು. ಯಾವುದೇ ರೀತಿಯ ದೂರು ಬರದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ನಿಯಮದ ವಿರುದ್ಧ ಕೆಲಸ ಮಾಡಲು ಯಾರಾದರೂ ಒತ್ತಾಯ ಮಾಡಿದರೆ ಅಧಿಕಾರಿಗಳು ಸಹ ದೂರು ನೀಡಬಹುದು ಎಂದರು. ಹುಲಸೂರು ತಾಲೂಕಿನ ಬೇಲೂರ ಹಾಗೂ ಗೋರ್ಟಾ(ಬಿ) ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎರಡು ಪ್ರಕರಣ ದಾಖಲಾಗಿವೆ. ಬೇಲೂರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಅವ್ಯವಹಾರದ ತನಿಖೆ ಪೂರ್ಣಗೊಂಡಿದ್ದು, ಗೋರ್ಟಾ ವ್ಯಾಪ್ತಿಯ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.

ಎಪಿಎಂಸಿಯಲ್ಲಿ ರೈತರು ಮಧ್ಯವರ್ತಿಗಳಿಂದ ಸಮಸ್ಯೆ ಎದುರಿಸಬೇಕಾಗುತ್ತಿದೆ. ಕ್ವಿಂಟಲ್‌ಗೆ 3 ಕೆಜಿ ಕೃಷಿ ಉತ್ಪನ್ನ ಶೇ.2ರಂತೆ ಹಣ ಕಡಿತಗೊಳಿಸುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ರುದ್ರಯ್ಯ ಸ್ವಾಮಿ, ಪ್ರಮುಖರಾದ ವೀರಾರಡ್ಡಿ, ಕಾಶಪ್ಪ ಬಿರಾದಾರ ಗಮನ ಸೆಳೆದರು.

ಅಲ್ಲದೆ ಹೆಸರು ಮತ್ತು ಉದು ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ಇತರ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಪರಿಶೀಲನೆ ನಡಿಸಿ ನೋಟಿಸ್ ಕೊಡಿ. ಅಗತ್ಯಬಿದ್ದರೆ ಕ್ರಮ ಜರುಗಿಸಬೇಕು ಎಂದು ಸ್ಥಳದಲ್ಲಿದ್ದ ಎಪಿಎಂಸಿ ಅಧಿಕಾರಿಗೆ ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮುಕುಲ್ ಜೈನ್, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಲೋಕಾ ಇನ್‌ಸ್ಪೆಕ್ಟರ್‌ಗಳಾದ ಬಾಬಾಸಾಹೇಬ ಪಾಟೀಲ್, ಉದ್ಯಂಡಪ್ಪ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್, ಪಿಎಸ್‌ಐಗಳಾದ ಜಯಶ್ರೀ ಹೊಡಲ್, ಸುವರ್ಣಾ ಮಲಶೆಟ್ಟಿ, ಲೋಕಾಯುಕ್ತ ಸಿಬ್ಬಂದಿ ವಿಷ್ಣುರಡ್ಡಿ, ಭರತ್, ಅಡಪ್ಪ, ಕಿಶೋರ, ಕುಶಾಲ್, ನಾಗಶೆಟ್ಟಿ, ಕಂಟೆಪ್ಪ ಇತರರಿದ್ದರು.