ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಕೀಲರ ಸಹಕಾರ ಅಗತ್ಯ: ಚಂದ್ರಶೇಖರ ಸಿ.

| Published : Jul 21 2024, 01:24 AM IST

ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಕೀಲರ ಸಹಕಾರ ಅಗತ್ಯ: ಚಂದ್ರಶೇಖರ ಸಿ.
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಮಧ್ಯಸ್ಥಿಕೆದಾರರಿಗೆ ಕೊಪ್ಪಳ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶನಿವಾರ ಎರಡು ದಿನಗಳ ಮಧ್ಯಸ್ಥಿಕೆ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ. ಚಾಲನೆ ನೀಡಿದರು.

ಕೊಪ್ಪಳ: ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕಾ ವಕೀಲರ ಸಹಕಾರ ತುಂಬಾ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ. ಹೇಳಿದರು.

ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಧ್ಯಸ್ಥಿಕೆ ಕೇಂದ್ರದ ಸಹಯೋಗದಲ್ಲಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಮಧ್ಯಸ್ಥಿಕೆದಾರರಿಗೆ ಕೊಪ್ಪಳ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎರಡು ದಿನಗಳ ಮಧ್ಯಸ್ಥಿಕೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನ್ಯಾಯಾಲಯಗಳಲ್ಲಿನ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿ ಮಾಡಲು ರಾಷ್ಟ್ರೀಯ ಮೆಗಾ ಲೋಕ ಅದಾಲತ್, ರಾಜಿ ಸಂಧಾನ ಕಾರ್ಯಕ್ರಮಗಳನ್ನು ಕಾನೂನು ಇಲಾಖೆ ಹಮ್ಮಿಕೊಳ್ಳುತ್ತಿದೆ. ಇದರ ಜತೆ ಮಧ್ಯಸ್ಥಿಕಾ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಮಧ್ಯಸ್ಥಿಕಾ ವಕೀಲರ ಮೂಲಕ ಇನ್ನೂ ತ್ವರಿತ ಹಾಗೂ ಸುಲಭವಾಗಿ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶಗಳಿವೆ. ವೈವಾಹಿಕ, ಜೀವನಾಂಶ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಇನ್ನೂ ಹಲವಾರು ಬಗೆಯ ಪ್ರಕರಣಗಳನ್ನು ಮಧ್ಯಸ್ಥಿಕಾ ವಕೀಲರ ಮೂಲಕ ಪರ್ಯಾಯವಾಗಿ ವಿಲೇವಾರಿಗೊಳಿಸುವ ಕುರಿತಂತೆ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ಸಹಯೋಗದೊಂದಿಗೆ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯ ಮಧ್ಯಸ್ಥಿಕೆದಾರರ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯ ಸದುಪಯೋಗ ಪಡೆದುಕೊಂಡು ಪ್ರಕರಣ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಮಧ್ಯಸ್ಥಿಕಾ ವಕೀಲರಿಗೆ ಕರೆ ನೀಡಿದರು.

ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ದೇಶದಲ್ಲಿ ಹಲವು ಪ್ರಕರಣಗಳು ಬಾಕಿಯಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳನ್ನು ರಾಜಿ ಸಂಧಾನ, ಲೋಕ ಅದಾಲತ್ ಹಾಗೂ ಮಧ್ಯಸ್ಥಿಕಾ ಕಾರ್ಯಕ್ರಮದ ಮೂಲಕ ಬಗೆಹರಿಸುವುದು ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ ಗುರಿಯಾಗಿದೆ. ಈ ದಿಶೆಯಲ್ಲಿ ಇತ್ತೀಚೆಗೆ ನಡೆದ ಅದಾಲತ್ ಮೂಲಕ ಕರ್ನಾಟಕ ರಾಜ್ಯದಲ್ಲಿ ಲಕ್ಷಗಟ್ಟಲೆ ಪ್ರಕರಣಗಳು ರಾಜಿಯಾಗಿದ್ದು, ಇದೊಂದು ದಾಖಲೆಯಾಗಿದೆ. ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ ದೇಶದಲ್ಲಿಯೇ ಅತ್ಯಂತ ಯಶಸ್ವಿಯಾಗಿದೆ. ನಮ್ಮಲ್ಲಿ ಮಧ್ಯಸ್ಥಿಕೆ ವ್ಯವಸ್ಥೆಯು ಕೌಟುಂಬಿಕ ನ್ಯಾಯಾಲಯದಲ್ಲಿ ಹೆಚ್ಚು ಸಫಲವಾಗಿದೆ. ಹಲವು ವಿಧದ ನ್ಯಾಯಾಲಯಗಳಲ್ಲಿಯೂ ಮಧ್ಯಸ್ಥಿಕೆ ವ್ಯವಸ್ಥೆಯ ಮೂಲಕ ಪ್ರಕರಣಗಳನ್ನು ರಾಜಿ ಮಾಡಲು ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಸರಸ್ವತಿದೇವಿ, ಹೆಚ್ಚುವರಿ ಜಿಲ್ಲಾ ತ್ವರಿತ (ಪೊಕ್ಸೋ) ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಮಾತನಾಡಿದರು.

ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ತರಬೇತುದಾರರಾದ ಗೀತಾದೇವಿ ಪಾಪಣ್ಣ ಹಾಗೂ ವೈಶಾಲಿ ಹೆಗಡೆ ಹಾಗೂ ನ್ಯಾಯಾಧೀಶರು, ಮಧ್ಯಸ್ಥಿಕೆದಾರರು ಉಪಸ್ಥಿತರಿದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆರ್. ಒಡೆಯರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ತರಬೇತುದಾರರು ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಮಧ್ಯಸ್ಥಿಕಾ ವಕೀಲರಿಗೆ ತರಬೇತಿ ನೀಡಿದರು.