ಸಾರಾಂಶ
ವಿಜಯಪುರ: ಗ್ರಾಮಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಗ್ರಾಮಗಳ ಅಭಿವೃದ್ಧಿ ಕುರಿತು ಚರ್ಚೆ, ಸಲಹೆ, ಸೂಚನೆಗಳು ನೀಡಬೇಕು ಎಂದು ಹಾರೋಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಾದೇವಿ ಮಂಜುನಾಥ್ ಹೇಳಿದರು.
ವಿಜಯಪುರ: ಗ್ರಾಮಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಗ್ರಾಮಗಳ ಅಭಿವೃದ್ಧಿ ಕುರಿತು ಚರ್ಚೆ, ಸಲಹೆ, ಸೂಚನೆಗಳು ನೀಡಬೇಕು ಎಂದು ಹಾರೋಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಾದೇವಿ ಮಂಜುನಾಥ್ ಹೇಳಿದರು.
ಹೋಬಳಿಯ ಹಾರೋಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮಹಳ್ಳಿಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಸಹಕಾರವೂ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.ಗ್ರಾಪಂ ಪಿಡಿಒ ಆರ್.ಜಿ.ಸೌಮ್ಯ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ನರೇಗಾ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು.
ಹಾರೋಹಳ್ಳಿ, ತಿಮ್ಮಹಳ್ಳಿ, ಚಿಕ್ಕನಹಳ್ಳಿ, ದೊಡ್ಡಮುದ್ದೇನಹಳ್ಳಿ, ಬುಳ್ಳಹಳ್ಳಿ ಗ್ರಾಮಗಳ ಸಾರ್ವಜನಿಕರು ಗ್ರಾಮಸಭೆಯಲ್ಲಿ ಸೇರಿದ್ದರು. ತಿಮ್ಮಹಳ್ಳಿ ಶಿವರಾಜು ಮಾತನಾಡಿ, ರಾಜಕಾಲುವೆ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸಿ ರಾಜಕಾಲುವೆಯ ಮೂಲಕ ನೀರು ಕೆರೆಗೆ ಹರಿದುಹೋಗುವಂತೆ ಮಾಡಬೇಕು. ದಂಡಿಗಾನಹಳ್ಳಿಯವರೆಗೂ ರಸ್ತೆ ನಿರ್ಮಾಣವಾಗಬೇಕು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು, ನರೇಗಾ ಯೋಜನೆಯಡಿ ಸಿ.ಸಿ.ರಸ್ತೆ ನಿರ್ಮಾಣ ಮಾಡುವಂತೆ ತಿಳಿಸಿದರು. ದೊಡ್ಡಮುದ್ದೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲ. ಈ ಕುರಿತು ನಾವು ಹಲವಾರು ಬಾರಿ ಮನವಿಗಳು ಕೊಟ್ಟರೂ ಯಾವುದೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ. ಅಂಗನವಾಡಿ ಕೇಂದ್ರ ಸುಸಜ್ಜಿತವಾಗಿಲ್ಲ. ಶಾಲೆಯ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮಸಭೆಯಲ್ಲಿ ತಾಲ್ಲೂಕು ಮಟ್ಟದ ಯಾವುದೇ ಅಧಿಕಾರಿಗಳು ಬಂದಿಲ್ಲ. ಅನುಷ್ಠಾನಾಧಿಕಾರಿಗಳು ಇಲ್ಲದೆ ಹೋದರೆ, ನಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವವರು ಯಾರು? ಗೈರಾಗಿರುವ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಶಿವರಾಜ್ ಒತ್ತಾಯಿಸಿದರು.ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಮನೋಹರ್, ಅಧಿಕಾರಿ ಬಿ.ವಿ.ಮಹೇಶ್, ಸದಸ್ಯರಾದ ಎಸ್.ಶ್ರೀನಿವಾಸ್, ಆಂಜಿನಮ್ಮ, ಮಂಜುಳಮ್ಮ, ನರಸಮ್ಮ, ಎನ್.ಮಂಜುಳಮ್ಮ, ಟಿ.ಎಂ.ಹರೀಶ್, ಡಿ.ಎಂ.ಸತೀಶ್, ಎಸ್.ಮಂಜುಳಾ, ನಾಗಮ್ಮ, ಎಂ.ಶಂಕರ್ ಪಂಚಾಯಿತಿ ಕಾರ್ಯದರ್ಶಿ ರಾಜೇಶ್, ಕರವಸೂಲಿಗಾರ ಮುನಿಕೃಷ್ಣಪ್ಪ, ಮುಖಂಡರು ಹಾಜರಿದ್ದರು.