ಲಕ್ಷಾಂತರ ಜನರ ಬಲಿದಾನದಿಂದ ದೇಶ ಸ್ವತಂತ್ರ: ಜಯತೀರ್ಥ ಕಟ್ಟಿ

| Published : Aug 21 2025, 02:00 AM IST

ಸಾರಾಂಶ

ಮಹಾತ್ಮ ಗಾಂಧೀಜಿಯವರು ಭಾರತವನ್ನು ಅಖಂಡವಾಗಿ ಉಳಿಸಲು ಪ್ರಯತ್ನ ಪಟ್ಟರೂ ಕೆಲವು ವ್ಯಕ್ತಿಗಳ ಸ್ವಾರ್ಥಕ್ಕಾಗಿ ದೇಶ ವಿಭಜನೆಯಾಯಿತು.

ಹಾವೇರಿ: ಸ್ವಾತಂತ್ರ್ಯ ಗಳಿಸಲು ದೇಶದಲ್ಲಿ ಲಕ್ಷಾಂತರ ಜನರ ಬಲಿದಾನವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೆ ಬರಲಿಲ್ಲ. ಇದರ ಹಿಂದೆ ಬಲಿದಾನಗಳ ಭಯಾನಕ ಇತಿಹಾಸವಿದೆ. ಭಾರತವನ್ನು ತುಂಡರಿಸುವ ಹುನ್ನಾರ ವ್ಯವಸ್ಥಿತವಾಗಿ ಜರುಗಿದೆ ಎಂದು ಬಿಜೆಪಿ ಪ್ರಮುಖರಾದ ಜಯತೀರ್ಥ ಕಟ್ಟಿ ತಿಳಿಸಿದರು.

ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಭಜನೆ ವಿಭೀಷಣ ಸ್ಮೃತಿ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಭಾರತವನ್ನು ಅಖಂಡವಾಗಿ ಉಳಿಸಲು ಪ್ರಯತ್ನ ಪಟ್ಟರೂ ಕೆಲವು ವ್ಯಕ್ತಿಗಳ ಸ್ವಾರ್ಥಕ್ಕಾಗಿ ದೇಶ ವಿಭಜನೆಯಾಯಿತು. ಅವೈಜ್ಞಾನಿಕ ವಿಭಜನೆಯಿಂದ ಲಕ್ಷಾಂತರ ಹಿಂದೂಗಳ ಬಲಿದಾನವಾಯಿತು. ವಿಭಜಿತ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಹಿಂದೂಗಳ ಮೇಲೆ ಅತ್ಯಾಚಾರ ಅನಾಚಾರಗಳು ನಡೆದವು. ಅಲ್ಲದೆ ಮುಸ್ಲಿಮರು ಬಹುಸಂಖ್ಯಾತರಿರವ ಸ್ಥಳಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯಿತು. ಆದರೆ ಭಾರತದಲ್ಲಿ ನೆಲೆಸಿದ ಮುಸ್ಲಿಮರ ಮೇಲೆ ಯಾವುದೇ ದೌರ್ಜನ್ಯ ನಡೆಯಲಿಲ್ಲ. ಅಂಕಿ- ಅಂಶಗಳ ಪ್ರಕಾರ ೨ ಲಕ್ಷಕ್ಕೂ ಅಧಿಕ ಭಾರತೀಯರ ಬಲಿದಾನವಾಗಿದೆ. ಇಂದು ನಾವು ಸ್ವಾತಂತ್ರ್ಯದ ವಿಷಯದಲ್ಲಿ ಕೆಲವೇ ವ್ಯಕ್ತಿಗಳನ್ನು ನೆನೆಯುತ್ತೇವೆ. ಆದರೆ ನಾವೆಲ್ಲರು ದೇಶಕ್ಕೆ ಪ್ರಾಣ ನೀಡಿದ ಹುತಾತ್ಮರನ್ನು ನೆನೆಯಬೇಕು ಎಂದರು.ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಾವಿಂದು ೭೯ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದೇವೆ. ಆದರೆ ನಾವು ದೇಶಕ್ಕೆ ಪ್ರಾಣ ನೀಡಿದ ವ್ಯಕ್ತಿಗಳನ್ನು ಸ್ಮರಿಸುತ್ತಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರಲು ಲಕ್ಷಾಂತರ ಜನರ ಪ್ರಾಣಾರ್ಪಣೆಯಾಗಿವೆ. ಆದರೆ ನಾವು ಸ್ವಾತಂತ್ರ್ಯವನ್ನು ಒಂದು ದಿನ ನೆನೆದು ಸುಮ್ಮನಾಗುತ್ತೇವೆ. ಭಾರತವನ್ನು ಅತ್ಯಂತ ವ್ಯವಸ್ಥಿತವಾಗಿ ಕುತಂತ್ರದಿಂದ ವಿಭಜಿಸಿದರು. ಅಖಂಡವಾಗಿದ್ದ ಭಾರತವನ್ನು ಧರ್ಮದ ಆಧಾರದಲ್ಲಿ ಸೀಳಿ ವಿಕೃತಿ ಮೆರೆದರು.

ಸ್ವಾತಂತ್ರ್ಯ ಸಂಘರ್ಷದಲ್ಲಿ ಭಗತ್ ಸಿಂಗ್, ರಾಜ ಗುರು, ಸುಖದೇವ, ಲಾಲಾರಜಪತರಾಯ್, ಬಾಲಾಗಂಗಾಧರ ತಿಲಕ ಅವರಂತಹ ನೂರಾರು ವ್ಯಕ್ತಿಗಳು ಬಲಿದಾನವಿದೆ. ಇಂದಿನ ಪೀಳಿಗೆ ಯಾವ ಉದ್ದೇಶಕ್ಕಾಗಿ ದೇಶವನ್ನು ವಿಭಜಿಸಲಾಯಿತು, ಯಾರ ಸ್ವಾರ್ಥ ಸಾಧನೆಗಾಗಿ ದೇಶವನ್ನು ತುಂಡರಿಸಲಾಯಿತು ಎಂಬ ಅಂಶಗಳನ್ನು ಅರಿತು ದೇಶದ ಅಭಿವೃದ್ದಿಗೆ ಕಟ್ಟಿಬದ್ದರಾಗಿ ನಿಲ್ಲಬೇಕು ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ಯುವ ಮೋರ್ಚಾ ವತಿಯಿಂದ ಹುಕ್ಕೇರಿ ಮಠದಿಂದ ಪಕ್ಷದ ಜಿಲ್ಲಾ ಕಾರ್ಯಾಲಯದವರೆಗೆ ಹರ್ ಘರ್ ತಿರಂಗಾ ಯಾತ್ರೆಯ ಬೈಕ್‌ ರ‍್ಯಾಲಿ ಜರುಗಿತು.ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಭೋಜರಾಜ ಕರೂದಿ ಮಾತನಾಡಿದರು. ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಭರತ್ ಬೊಮ್ಮಾಯಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸಿಮಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ಸಿದ್ದರಾಜ ಕಲಕೋಟಿ, ನಾಗೇಂದ್ರ ಕಡಕೋಳ, ಲಿಂಗರಾಜ ಚಪ್ಪರದಹಳ್ಳಿ ಇತರರು ಇದ್ದರು. ಕಿರಣಕುಮಾರ ಕೋಣನವರ ಕಾರ್ಯಕ್ರಮ ನಿರ್ವಹಿಸಿದರು.