ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಭಾರತ ದೇಶವನ್ನು ಯಾವೊಬ್ಬ ನೇತಾರರಿಂದ ಸುಧಾರಿಸಲು ಸಾಧ್ಯವಿಲ್ಲ, ದೇಶ ಸುಧಾರಣೆಗೊಳ್ಳಬೇಕಾದರೆ ಸಾಮಾನ್ಯ ಜನರ ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಕೃಷ್ಣಾನಂದ ಕಾಮತ ಹೇಳಿದರು‌.

ಪಟ್ಟಣದ ಶ್ರೀಗುರುಸಿದ್ದೇಶ್ವರ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅನೇಕರು ಭಾರತದ ಮೇಲೆ ದಂಡೆತ್ತಿ ಬಂದು ಲೂಟಿ ಮಾಡಿದ್ದಲ್ಲದೆ ನಮ್ಮಲ್ಲಿ ಒಡಕು ಹುಟ್ಟಿಹಾಕಿ ನಮ್ಮನ್ನೆಲ್ಲಾ ಗುಲಾಮಗಿರಿಗೆ ದೂಡಿದ್ದಾರೆ. ಇದೀಗ ಅದರ ಅರಿವಾಗಿದ್ದರಿಂದ ಹಿಂದುಗಳು ಒಂದಾಗುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ೧೦೦ ವರ್ಷಗಳ ಕಠಿಣ ತಪ್ಪಸ್ಸಿನ ಪರಿಣಾಮ ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳುವ ಸಂದರ್ಭ ಆರಂಭವಾಗಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರಗಳು ನಡೆಯುತ್ತಿದ್ದು, ದೇಶವನ್ನು ಅಭದ್ರಗೊಳಿಸುವ ನಿಟ್ಟಿನಲ್ಲಿ ಭಯೋತ್ಪಾದನೆಯ ಚಟುವಟಿಕೆಗಳು ನಡೆಯುತ್ತಿವೆ. ಡಾಕ್ಟರ್‌ಗಳು ಸಹ ಇದೀಗ ಬಾಂಬರ್‌ಗಳಾಗಿ ಬದಲಾಗಿದ್ದಾರೆ. ಇಂತಹ ದುಷ್ಕೃತ್ಯವೆಸಗುವ ದ್ರೋಹಿಗಳನ್ನು ಬೇರು ಸಹಿತ ಕಿತ್ತೊಗೆಯಬೇಕಾದ ಪರಿಸ್ಥಿತಿ ನಮ್ಮದಾಗಿದ್ದು, ನಾವೆಲ್ಲ ಸಂಘಟಿತರಾಗಿ ದೇಶದ ಭದ್ರತೆಗೆ ನೆರವಾಗಬೇಕಿದೆ ಎಂದು ಕರೆ ನೀಡಿದರು.ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ವಿಶ್ವ ಹಿಂದೂ ಸಮ್ಮೇಳನ ಯಶಸ್ವಿಗೊಂಡಿದೆ. ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ಮಹನೀಯರನ್ನು ಜೀವನ ಪಾಠವನ್ನು ಮುಂದಿನ ಪೀಳಿಗೆಯವರೆಗೂ ಕೊಂಡೊಯ್ಯುವುದು ಈ ಕಾರ್ಯಕ್ರಮದ ಉದ್ದೇಶ. ಹಿಂದೂಗಳ ಮೇಲೆ ದಬ್ಬಾಳಿಕೆ ಹಾಗೂ ಇತರೆ ಚಟುವಟಿಕಗಳು ನಡೆದರೂ ಹಿಂದೂಗಳು ಒಡೆದಿಲ್ಲ. ಯಾವುದೇ ದೇಶ ಹಾಗೂ ಸಂಸ್ಕೃತಿ ಹಾಳಾದರೆ ಮತ್ತೆ ಹುಟ್ಟಿಸಿ ಕಟ್ಟಬಹುದು, ಆದರೆ, ಭಾರತ ಹಾಳಾದರೆ ಎಂದೆಂದಿಗೂ ಕಟ್ಟಲಾಗದು. ಹೀಗಾಗಿ, ಭಾರತದ ಉಳುವಿಗಾಗಿ ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ವಿರೇಶ್ವರ ಸ್ವಾಮೀಜಿ, ರಾಷ್ಟ್ರ ಸೇವಿಕಾ ಸಮಿತಿಯ ನಗರ ಕಾರ್ಯವಾಹಿಕ ಪ್ರತಿಭಾ ಉಣಕಲ್ಲಕರ ದಿಕ್ಸೂಚಿ ಭಾಷಣ ಮಾಡಿದರು. ಸಂಗೀತ ಶಿಕ್ಷಕ ಈಶ್ವರ ಗಡಿಬಿಡಿ ಹಾಗೂ ಪ್ರಹ್ಲಾದ್ ಶಿಗ್ಗಾಂವಿ ಪ್ರಾರ್ಥಿಸಿದರು. ಖೋದಾನಪೂರ ಅಂಬಾಭವಾನಿ ಮಠದ ವಿದ್ಯಾಭಾರತಿ ಮಾತಾಜಿ, ಸರಸ್ವತಿ ಪೀಠಾಧೀಶ ಆರ್.ಪ್ರಮೋದ ಸ್ವಾಮೀಜಿ, ಮರಿಕಟ್ಟಿಯ ಸಿದ್ದೇಶ್ವರ ದೇವರು, ಹಿಂದೂ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ರಮೇಶಗೌಡ ಪಾಟೀಲ, ಸಮಿತಿ ಅಧ್ಯಕ್ಷ ಮಡಿವಾಳಪ್ಪ ಮುರಗೋಡ ಸೇರಿ ಇತರರು ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಕದಂ ನಿರೂಪಿಸಿ, ವಂದಿಸಿದರು.ಗಮನ ಸೆಳೆದ ಮೆರವಣಿಗೆ: ಹಿಂದೂ ಸಮ್ಮೇಳನ ಸಮಿತಿಯಿಂದ ಪಟ್ಟಣದಲ್ಲಿ ನಡೆದ ಶೋಭಾಯಾತ್ರೆಗೆ ಜಾನಪದ ವಾದ್ಯ ಮೇಳಗಳ ಮೆರವಣಿಗೆ ಮೆರಗು ನೀಡಿತು. ರಾಣಿ ಚನ್ನಮ್ಮಾಜಿ ವರ್ತುಲದಲ್ಲಿ ರಾಣಿ ಚನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಪ್ರತಿಮೆಗಳಿಗೆ ಗೌರವ ಸಲ್ಲಿಸಿ. ನಂದಿ ಕೋಲಿಗೆ ಪೂಜೆ ಸಲ್ಲಿಸಿ ನಡೆದ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳ ಸಂಚರಿಸಿತು. ಭಾವ ಚಿತ್ರಗಳು, ಎತ್ತಿನ ಚಕ್ಕಡಿ, ಒಂಟೆ, ಕುದರೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ವಿಶ್ವಹಿಂದು ಪರಿಷತ್ ಕ್ಷೇತ್ರಿಯ ಸಾಮರಸ್ಯ ಪ್ರಮುಖ ಕೃಷ್ಣಾಜೀ ಭಟ್, ಶಾಸಕ ಬಾಬಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಲಕ್ಷ್ಮೀ ಇನಾಮದಾರ, ಶಿವನಶಿಂಗ ಮೊಖಾಶಿ ಸೇರಿ ವಿವಿಧ ಹಿಂದುಪರ ಸಂಘಟನೆಗಳ ಸ್ವಯಂ ಸೇವಕ ಕಾರ್ಯಕರ್ತರು ಸೇರಿ ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಹಿನ್ನಲೆಯಲ್ಲಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿತ್ತು.