ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿ ಜೀವನ ನಡೆಸುತ್ತಿರುವ ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದೆ. ಆದರೆ, ಕೆಲವರು ರಾಜಕೀಯ ಲಾಭಕ್ಕಾಗಿ ಕೋಮುವಾದ ಹುಟ್ಟು ಹಾಕಿದ್ದಾರೆ. ಇಂತಹ ಅಧುನಿಕ ಬ್ರಿಟಿಷರಿಂದ ಈ ದೇಶವನ್ನು ರಕ್ಷಿಸುವ ಅನಿವಾರ್ಯತೆ ಇದೆ ಎಂದು ಚಿಂತಕ, ರೈತ ಮುಖಂಡ, ಹಿರಿಯ ನ್ಯಾಯವಾದಿ ಭಾಸ್ಕರ್ ರಾವ ಮುಡಬೂಳ ತಿಳಿಸಿದರು.ತಾಲೂಕಿನ ಭೀಮರಾಯನಗುಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಜೀದ್ ಇ-ಲಾಹಿ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ಸರ್ವ ಜನಾಂಗದ ಶಾಂತಿ ತೋಟ ಕಟ್ಟುವ ದಿಕ್ಕಿನಡೆಗೆ ನಡೆದರೆ, ಸೂಫಿ, ಶರಣರ ಪಡೆದ ಸಗರನಾಡು ಭಾವೈಕ್ಯತೆ ಪ್ರತಿಯೊಬ್ಬ ಮನೆ ಮನದಲ್ಲಿ ಇದೆ. ನಮಗೆ ಧರ್ಮದ ನಂಜು ಬೇಡ. ರಾಜಕೀಯ ಕನ್ನಡಕ ತೆಗೆದು ನೋಡಿದರೆ ಸತ್ಯ ಗೋಚರವಾಗುತ್ತದೆ ಎಂದರು.1857ರ ದಂಗೆ ಕುರಿತು ವಿನಾಯಕ ದಾಮೋದರ ಸಾವರ್ಕರ್ ಅವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನುವ ಪುಸ್ತಕದಲ್ಲಿ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಅದೇನೆಂದರೆ ಔರಂಗಜೇಬನ ಕಾಲಘಟ್ಟದಲ್ಲಿ ಮುಸ್ಲಿಂರ ಬಗ್ಗೆ ತಪ್ಪು ಕಲ್ಪನೆ ಇರುವುದು ಸರಿ. ಆದರೆ, ಈಗ ನಾವು ಮುಸ್ಲಿಂರ ಬಗ್ಗೆ ತಪ್ಪು ಕಲ್ಪನೆ ಮಾಡಿದರೆ ಅದು ಅನ್ಯಾಯವಾಗುತ್ತದೆ. ಮೂರ್ಖತನವಾಗುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದರು.
ಈಗ ಮುಖ್ಯವಾಗಿ ಕೋಮು ಸೌಹಾರ್ದತೆ ನೆಲೆಗೊಳ್ಳಬೇಕು. ಕರ್ನಾಟಕ ಶಾಂತಿಯ ಹೂ ದೋಟ ಇಲ್ಲಿಂದಲೇ ಶಾಂತಿ ಆರಂಭ ಆಗಬೇಕು. ನಮ್ಮ ಮನುಕುಲ ಉಳಿಯಬೇಕು. ನಮ್ಮ ಮಕ್ಕಳಿಗೆ ಇತಿಹಾಸದ ಬಗ್ಗೆ, ಈ ದೇಶದ ಸಂಸ್ಕೃತಿಯ ಬಗ್ಗೆ ಹಾಗೂ ಸ್ವಾತಂತ್ರ್ಯ ಯೋಧರ ಬಗ್ಗೆ ತಿಳಿಸಿಕೊಡುವ ಕೆಲಸ ವಾಗಬೇಕಿದೆ.ನ್ಯಾಯವಾದಿ, ಯುವಕ ಯೂಸೂಫ ಸಿದ್ದಕಿ ಅವರು ಭೀಮರಾಯನ ಗುಡಿಯ ಬಾಪುಗೌಡ ವೃತ್ತದ ಬಳಿ ಕೋಟಿ ಬೆಲೆಬಾಳುವ ಜಾಗವನ್ನು ಪ್ರಾರ್ಥನೆ ಮಂದಿರ ಕಟ್ಟಿಸುವ ಮೂಲಕ ತಂದೆಯ ಕನಸು ನನಸು ಮಾಡುವ ಮೂಲಕ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಶಿಕ್ಷಣ ಚಿಂತಕ ತಿಮ್ಮಯ್ಯ ಪುರ್ಲೆ ಮಾತನಾಡಿ, ದೇವತೆಗಳು ಸಹ ಧರ್ಮ ಹಾಗೂ ಜಾತಿಯಿಂದ ದೂರ ಉಳಿದು ಮನುಜ ಪಥ ಪಾಲಿಸಿಕೊಂಡು ಬಂದಿದ್ದಾರೆ. ಎನ್ನುವುದಕ್ಕೆ ತಿಂಥಣಿ ಮೌನೇಶ್ವರ, ಗೋಗಿ ಚಂದಾಹುಸೇನಿ ದರ್ಗಾ, ಬಲಭೀಮೇಶ್ವರ ಹೀಗೆ ಸಾಲು ಸಾಲು ದೇವತೆಗಳು ಭಾವೈಕ್ಯ ಮೂಡಿಸುವ ತಾಣವಾಗಿವೆ. ಯುವಕ ಯೂಸೂಫ ಸಿದ್ದಕಿ ಅವರ ತಂದೆಯ ಕನಸು ನನಸು ಮಾಡುವ ಮೂಲಕ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ ಎಂದರು.ಇದೆ ವೇಳೆ ನ್ಯಾಯವಾದಿ ಯೂಸುಫ್ ಸಿದ್ದಿಕಿ, ಸಯ್ಯದ ಮಹಿಮೂದ ಕೋಶವಾರ, ಸಯ್ಯದ ಇಸ್ಮಾಯಿಲ್ ಗೋಗಿ, ಸಯ್ಯದ ಮುಕ್ತಾರಪಾಶ, ಸಯ್ಯದ ಶಂಶಲಮ್ ಹುಸೇನಿ, ಡಾ.ಅನೀಸ್ ಸಿದ್ದಕಿ, ಅತೀಕ್ ಸಿದ್ದಕಿ, ಸಜ್ಜದ ಚಾಂದಾಪಾಶ ಗೋಗಿ, ಮುಖಂಡರಾದ ಆರ್.ಚೆನ್ನಬಸ್ಸು ವನದರ‍್ಗ, ಮಾನಸಿಂಗ ಚವ್ಹಾಣ, ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಹಯ್ಯಾಳಪ್ಪ ಹೊಸಮನಿ ಭಾಗವಹಿಸಿದ್ದರು.
ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟಾಗ ಮುಸ್ಲಿಂರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಅನೇಕರು ತಮ್ಮ ಸರ್ಕಾರಿ ಹುದ್ದೆ ತ್ಯಜಿಸಿದರು. ನಿಸಾರ್ ಅಹ್ಮದ್ ಖಾನ್ ಎನ್ನುವವರು ಸರ್ಕಾರಿ ಹುದ್ದೆಯನ್ನು ತ್ಯಜಿಸಿದ ಪ್ರಥಮ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದರು. ಇವರ ಜೊತೆಗೆ ಮಝ್ಹರುಲ್ ಹಕ್, ಡಾ. ಗುಲಾಮ್ ಇಮಾಮ್, ಶಾಹ್ ಗಫೂರ್, ಮೌಲಾನ ಅಬ್ದುಲ್ ಬಾರಿ, ರಹೀಮ್ ಬಕ್ಷ್, ಮೌಲನ ಶಾಹ್ ಮುಹಮ್ಮದ್ ಝುಬ್ಯೆರ್, ಹಸೇನ್ ಅಲಿ, ತಸದ್ದೂಕ್ ಅಹ್ದದ್ ಖಾನ್ ಶೇರ್ವಾನಿ ಮೊದಲಾನ ಅನೇಕರು ಇದೇ ದಾರಿಯನ್ನು ಅನುಸರಿಸಿ ಗಾಂಧೀಜಿಯವರು ಕರೆಕೊಟ್ಟ ಅಸಹಕಾರ ಚಳುವಳಿಯ ಬೆನ್ನೆಲುಬಾಗಿ ನಿಂತರು ಎಂದು ಹಿರಿಯ ನ್ಯಾಯವಾದಿ ಬಾಸ್ಕರ್ ರಾವ ಮುಡಬೂಳ ಹೇಳಿದರು.