ಸಾರಾಂಶ
ಸಂಸ್ಕೃತ ಕೇವಲ ಭಾಷೆ ಅಲ್ಲ. ದೇಶವನ್ನು ಸುಸಂಸ್ಕೃತವನ್ನಾಗಿಸುವ ಭಾಷೆ. ಭಾರತೀಯ ಇತಿಹಾಸದಲ್ಲೇ ಕೆಲವು ಶೃದ್ಧಾ ಬಿಂದುಗಳಿವೆ. ಅದರಲ್ಲಿ ಸಂಸ್ಕೃತ ಒಂದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ: ಸಂಸ್ಕೃತ ಕೇವಲ ಭಾಷೆ ಅಲ್ಲ. ದೇಶವನ್ನು ಸುಸಂಸ್ಕೃತವನ್ನಾಗಿಸುವ ಭಾಷೆ. ಭಾರತೀಯ ಇತಿಹಾಸದಲ್ಲೇ ಕೆಲವು ಶೃದ್ಧಾ ಬಿಂದುಗಳಿವೆ. ಅದರಲ್ಲಿ ಸಂಸ್ಕೃತ ಒಂದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ವಾರ್ಷಿಕ ಮಹಾಧಿವೇಶನ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಕ್ಕೆ ಹೆಚ್ವಿನ ಮಹತ್ವವಿದೆ. ಸಂಸ್ಕೃತಿಯನ್ನೇ ಪ್ರಚಾರ ಮಾಡುವವರು ಸಂಸ್ಕೃತ ಶಿಕ್ಷಕರು. ದೇಶವನ್ನು ಒಗ್ಗೂಡಿಸುವುದೇ ಸಂಸ್ಕೃತ ಭಾಷೆಯಾಗಿದೆ. ಈ ಸಂಸ್ಕೃತಿ ಪ್ರಪಂಚಕ್ಕೆ ಅವಶ್ಯಕತೆ ಇದೆ ಎಂದರು.ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಸಮಾಜವನ್ನು ಜಾಗೃತಗೊಳಿಸುತ್ತವೆ. ಗೋವನ್ನು ಗೋ ಮಾತೆ ಎಂದು ಕರೆಯುತ್ತೇವೆ. ನದಿ, ಪ್ರಾಣಿಗಳಿಗೆ ಏನೇ ಅನ್ಯಾಯವಾದರೂ ಭಾರತೀಯರು ಸಹಿಸುವುದಿಲ್ಲ. ದೇಶದಲ್ಲಿ ಸತ್ಪ್ರಜೆ ನಿರ್ಮಾಣದಲ್ಲಿ ಸಂಸ್ಕೃತ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸ್ಕೃತ ಅಧ್ಯಾಪಕರು ದೇಶದ ರಾಯಭಾರಿಗಳು. ಭಾರತಕ್ಕೆ ಜನ್ಮ ದಿನಾಂಕ ಇಲ್ಲ. ಯಾವ ದೇಶಕ್ಕೆ ಜನ್ಮ ದಿನಾಂಕವಿರುವುದಿಲ್ಲವೋ ಆ ದೇಶಕ್ಕೆ ಸಾವೂ ಇಲ್ಲ ಎಂದ ಅವರು, ಪಾನ್ ಬೀಡಾ ಮಾರುವ ವ್ಯಕ್ತಿಯೂ ಕೂಡ ಶಿವಮೊಗ್ಗದಲ್ಲಿ ಸಂಸ್ಕೃತ ಮಾತನಾಡುತ್ತಾನೆ. ಸಂಸ್ಕೃತ ಅಧ್ಯಯನ ಹೇಗೆ ನಡೆಯುತ್ತಿದೆ ಎಂದು ವೀಕ್ಷಿಸಲು ಉತ್ತರಾಖಂಡದ ಶಿಕ್ಷಣ ಸಚಿವರು ಮತ್ತೂರಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನ ಧೀಮಂತ ಸಂಸ್ಕೃತಿ ಭಾರತದ ಸಂಸ್ಕೃತಿ. ಈ ಭಾಷೆಯನ್ನು ನಿರ್ಲಕ್ಷಿಸಿದ ಸಂದರ್ಭದಲ್ಲಿ ಸಂಸ್ಕೃತ ಭಾಷೆಯನ್ನು ಅಪ್ಪಿ, ಪ್ರೀತಿಸಿ ಪೋಷಿಸಿದವರು ಮಠ ಮಂದಿರಗಳು. ಮಠ ಮಂದಿರಗಳು ಗುರುಜಂಗಮರ ವಾಸಸ್ಥಳವಾಗದೆ ಜ್ಞಾನಾರ್ಜನೆಯ ಕೇಂದ್ರಗಳಾದವು. ಭಾಷೆಯ ಬೆಳವಣಿಗೆಗೆ ಪೂರಕವಾದವು. ಡಿಎಡ್‌ಗೆ ಸಮಾನವಾದ ತರಬೇತಿ ಸಂಸ್ಥೆಗಳನ್ನು ತೆರೆದು ಸಂಸ್ಕೃತ ತರಬೇತಿ ನೀಡಿ ಶಿಕ್ಷಕರಿಗೆ ನೀಡುವ ವೇತನ ನೀಡಬೇಕು ಎಂದರು.ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ.ಅಹಲ್ಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಕ್ಕಿನ ಕಲ್ಮಠದ ಶ್ರೀಮಜ್ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಸಂಸ್ಕೃತದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಮಹನೀಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಕುಮಾರ, ಸಂಸ್ಕೃತ ನಿರ್ದೇಶನಾಲಯದ ನಿರ್ದೇಶಕ ಪಾಲಯ್ಯ, ಕೆ.ಇ.ಕಾಂತೇಶ, ಪ್ರಸಾರಾಂಗ ಸದಸ್ಯೆ, ಡಾ.ರೇಣುಕಾರಾಧ್ಯ, ಬಂಗಾರಮ್ಮ, ವಿರೂಪಾಕ್ಷಪ್ಪ, ಪರಶಿವಮೂರ್ತಿ, ಜಗದೀಶ್, ರಾಜಣ್ಣ, ರಂಗೇಗೌಡ, ನಾಗೇಂದ್ರ ಗುಮ್ಮಾನಿ ಇತರರಿದ್ದರು.
ವೇ.ಮೂ.ಲಕ್ಷ್ಮೀನಾರಾಯಣ ಭಟ್ಟ ಸ್ವಾಗತಿಸಿದರು. ಆರ್.ಟಿ.ಹೆಗಡೆ ನಿರ್ವಹಿಸಿದರು.