೧೯೯೧-೯೨ರಲ್ಲಿ ಪೆಟ್ರೋಲ್-ಡೀಸೆಲ್ ಖರೀದಿಸಲು ಡಾಲರ್ ಇರಲಿಲ್ಲ. ೪ ಸಾವಿರ ಕೆಜಿ ಚಿನ್ನ ನೀಡಿ ಡಾಲರ್ ಖರೀದಿಸಿ ಇಂಧನ ಪಡೆಯಬೇಕಾಯಿತು.

ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ ಕಾರ್ಯಕ್ರಮ । ಕುತಂತ್ರಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ಮೋದಿ ನಾಯಕತ್ವದಲ್ಲಿ ದೇಶ ಸದೃಢವಾಗಿದೆ, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ವಿಶ್ವದ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿರುವ ಕುತಂತ್ರಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ಪ್ರಧಾನಿಯಾದ ಮೇಲೆ ದೇಶವನ್ನು ಶಕ್ತಿಯುತವಾಗಿ ಕಟ್ಟುವ ಕೆಲಸ ಮಾಡಿದ್ದಾರೆ. ವಿಶ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ನರೇಂದ್ರ ಮೋದಿ ಕೇಂದ್ರ ಬಿಂದುವಾಗಿದ್ದಾರೆ ಎಂದರು.

೧೯೯೧-೯೨ರಲ್ಲಿ ಪೆಟ್ರೋಲ್-ಡೀಸೆಲ್ ಖರೀದಿಸಲು ಡಾಲರ್ ಇರಲಿಲ್ಲ. ೪ ಸಾವಿರ ಕೆಜಿ ಚಿನ್ನ ನೀಡಿ ಡಾಲರ್ ಖರೀದಿಸಿ ಇಂಧನ ಪಡೆಯಬೇಕಾಯಿತು. ಇಂದು ೭೨೧ ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲಿದೆ. ೧೪ ವರ್ಷಗಳಲ್ಲಿ ಮೋದಿ ಹಣ ಕೂಡಿಟ್ಟಿದ್ದಾರೆ. ಯುದ್ಧದಂತಹ ಸಂದರ್ಭದಲ್ಲೂ ೬೦ ದಿನಗಳಿಗೆ ಆಗುವಷ್ಟು ಇಂಧನ ಶೇಖರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಮೋದಿ ಅವರನ್ನು ಅಧಿಕಾರದಿಂದ ದೂರ ಇಡಬೇಕೆಂಬ ಒಂದೇ ಉದ್ದೇಶದಿಂದ ಕಾಂಗ್ರೆಸ್ ಮತ್ತು ವಿರೋಧಿಗಳು ೨೦೧೫ರಿಂದಲೇ ಅಶಾಂತಿ ಸೃಷ್ಟಿಸುತ್ತಿದ್ದಾರೆ. ನೋಟ್ ಬ್ಯಾನ್, ರೈತ ಮಸೂದೆ, ಅಗ್ನಿವೀರ ನೇಮಕಾತಿ ಸೇರಿದಂತೆ ಕೇಂದ್ರದ ಪ್ರತಿ ಯೋಜನೆಯನ್ನೂ ವಿರೋಧಿಸಿ ದೇಶ ವಿರೋಧಿಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಕಳೆದ ೧೪ ವರ್ಷಗಳಿಂದ ಟೂಲ್‌ಕಿಟ್ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದರು.

ಶ್ರೀಲಂಕಾ, ಬಾಂಗ್ಲಾದೇಶದಂತಹ ನೆರೆ ದೇಶಗಳ ಪರಿಸ್ಥಿತಿ ನೋಡಿ. ದೇಶದಲ್ಲಿ ಅರಾಜಕತೆ ಸೃಷ್ಟಿಯಾದರೆ ಅಧೋಗತಿಗೆ ಇಳಿಯುತ್ತದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ಸಿಜಿಪಿ ಹೋರಾಟ ಮತ್ತು ಕಾಂಗ್ರೆಸ್ ಹೋರಾಟ ಒಂದೇ. ದೇಶವನ್ನು ಅಸ್ಥಿರಗೊಳಿಸುವುದು ಅವರ ಸಿದ್ಧಾಂತ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದವರು ಮೋದಿ ಎಂದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಅರಾಜಕತೆ ಸೃಷ್ಟಿಸುವ ಬಗ್ಗೆ ಕಲಿತು ಬರುತ್ತಾರೆ. ಸೈನಿಕರು, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ ಎಂದು ಟೀಕಿಸಿದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ ಇದ್ದರು.