ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಭಾರತ ಜಗತ್ತಿನ ಮೊದಲ 5ನೇ ಆರ್ಥಿಕತೆ ಹೊಂದಲು ಪ್ರತಿಯೊಬ್ಬ ಶ್ರೀಸಾಮಾನ್ಯನು ನೀಡುವ ತೆರಿಗೆಯಿಂದ ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಹಾಗೂ ಗೀತ ರಚನೆಕಾರ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ಅರ್ಥಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃತಕ ಬುದ್ಧಿಮತ್ತೆ ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಡಿಜಿಟಲ್ ಯುಗದಲ್ಲಿ ಅರ್ಥಶಾಸ್ತ್ರವನ್ನು ಕಲಿಸುವುದರ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಜಗತ್ತು ತಂತ್ರಜ್ಞಾನಾಧಾರಿತವಾಗಿದೆ. ತಂತ್ರಜ್ಞಾನದ ಮೂಲಕ ಎಲ್ಲವೂ ಸಾಗುವಂತ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ತಂತ್ರಜ್ಞಾನವನ್ನು ಶಿಕ್ಷಕರು ಬಳಸಿಕೊಂಡು ತಮ್ಮ ಬೋಧನೆಯನ್ನು ಪರಿಣಾಮಕಾರಿಯಾಗಿಸಿಕೊಳ್ಳಬೇಕು. ನಾವು ಸಿದ್ಧ ಪಡಿಸುವ ಪಠ್ಯಗಳು ಮನುಷ್ಯನ ಬದುಕನ್ನು ರೂಪಿಸುವಂತಿರಬೇಕು ಎಂದರು.
ಜಾತಿ, ಮತ, ಪಂಥಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿದಾಗ ಅನಾರೋಗ್ಯಕರ ಸಮಾಜದ ಸೃಷ್ಟಿಗೆ ನಾವೇ ಕಾರಣರಾಗುತ್ತೇವೆ. ಪಠ್ಯಗಳು ಮನುಷ್ಯ ಮನುಷ್ಯನನ್ನು ಬೆಸೆಯುವಂತಿರಬೇಕು. ಮನುಷ್ಯನ ಬದುಕು ಅತ್ಯಂತ ಸರಳವಾಗಿರಬೇಕು. ಅದುವೇ ನಿಜವಾದ ಆಧ್ಯಾತ್ಮಿಕತೆ. ಯಾವುದು ಅಹಂಕಾರ ಕೊಡುತ್ತದೆ ಅದು ಜ್ಞಾನವನ್ನು ನೀಡುವುದಿಲ್ಲ ಎಂದು ತಿಳಿಸಿದರು.ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಹಣ ಮನುಷ್ಯನಿಗೆ ನೆಮ್ಮದಿಯನ್ನು ತಂದು ಕೊಡಬೇಕು. ಹಣವೇ ನಮ್ಮ ಬದುಕಿನ ಉದ್ದೇಶವಾಗಬಾರದು. ಕೃತಕ ಬುದ್ಧಿಮತ್ತೆ ಇಂದು ಜಗತ್ತನ್ನು ಆಳುತ್ತಿದೆ. ಇದರಿಂದಾಗಿ ಜಗತ್ತು ತಲ್ಲಣಗೊಂಡಿದೆ. ಮುಂದಿನ ದಿನಮಾನದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮನುಷ್ಯನಿಗೆ ಅತಿ ದೊಡ್ಡ ಸವಾಲನ್ನು ಇದು ಒಡ್ಡಲಿದೆ ಎಂದರು.ನಮ್ಮ ಬೋಧನಾ ವ್ಯವಸ್ಥೆಗಳು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕು. ಪಾರಂಪರಿಕವಾಗಿ ಬೋಧಿಸುತ್ತಿರುವ ಕ್ರಮವನ್ನು ಬದಲಾಯಿಸಿಕೊಂಡು ಆಧುನಿಕ ತಂತ್ರಜ್ಞಾನ ಆಧಾರಿತವಾಗಿ ಬೋಧಿಸಬೇಕು. ನಮ್ಮ ವಿದ್ಯಾರ್ಥಿಗಳು ಭವಿಷ್ಯದ ಸವಾಲನ್ನು ಎದುರಿಸುವ ಸಾಮರ್ಥ್ಯವನ್ನು ನಾವು ವಿದ್ಯಾರ್ಥಿಗಳಲ್ಲಿ ತುಂಬಬೇಕು ಎಂದು ತಿಳಿಸಿದರು.ಪ್ರಾಚಾರ್ಯ ಡಾ.ಎಸ್.ಎಸ್.ತೇರದಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರ್ಥಶಾಸ್ತ್ರವು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರು ಅರ್ಥಶಾಸ್ತ್ರ ವಿಷಯ ತಿಳಿಯಬೇಕು. ಆ ಮೂಲಕ ತಮ್ಮ ಹಣಕಾಸಿನ ನಿರ್ವಹಣೆ ಅತ್ಯುತ್ತಮ ಪಡಿಸಿಕೊಳ್ಳುವುದರ ಜತೆಗೆ ದೇಶದ ಆರ್ಥಿಕತೆಗೆ ಕೊಡುಗೆ ಕೊಡಬಹುದು ಎಂದರು.ಪ್ರೊ.ಡಿ.ಎನ್.ಪಾಟೀಲ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಅರ್ಥಶಾಸ್ತ್ರ ಪಠ್ಯಕ್ರಮವನ್ನು ಸಿದ್ಧಪಡಿಸಬೇಕು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಮ್, ಡಾ.ಕಿರಣ್ ಕುಮಾರ್, ಪ್ರೊ.ಆರ್.ಎಂ.ತೇಲಿ, ಡಾ.ಬಿ.ಎಸ್.ಕಾಂಬ್ಳೆ, ಡಾ.ಅರ್ಜುನ್ ಜಂಬಗಿ ಹಾಗೂ ಅರ್ಥಶಾಸ್ತ್ರದ ಮೌಲ್ಯಮಾಪಕರು, ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಅಪ್ಪು ಮಾದರ ಪ್ರಾರ್ಥಿಸಿದರು. ಡಾ.ಎನ್.ಪಿ.ಬಿರಾದಾರ ಸ್ವಾಗತಿಸಿದರು. ಉಪನ್ಯಾಸಕ ರಾಜು ಕಪಾಲಿ ನಿರೂಪಿಸಿದರು. ರುದ್ರಪ್ಪ ಅರಳಿಮಟ್ಟಿ ವಂದಿಸಿದರು.ಅರ್ಥಶಾಸ್ತ್ರವು ಹಣಕಾಸಿನ ಕುರಿತು ಬೋಧಿಸುತ್ತದೆ. ಅದರ ಜತೆಗೆ ಭಾವಕೋಶದ ವಿಸ್ತರಣೆಯೂ ಆಗಬೇಕು. ತಂತ್ರಜ್ಞಾನ ಮನುಷ್ಯನನ್ನು ಭೌತಿಕವಾಗಿ ದೂರ ಮಾಡಿದೆ. ಸಂಪತ್ತಿನ ಗಳಿಕೆಗಾಗಿ ದೂರಾದ ನಮ್ಮ ಮಕ್ಕಳಿಂದ ನಾವು ಕೇವಲ ಧ್ವನಿಯನ್ನು ಕೇಳುತ್ತ ಬದುಕನ್ನು ಸವೆಸುತ್ತಿದ್ದೇವೆ.
-ಜಯಂತ ಕಾಯ್ಕಿಣಿ, ಹಿರಿಯ ಸಾಹಿತಿ ಹಾಗೂ ಗೀತ ರಚನೆಕಾರ.ನಮ್ಮ ಪಠ್ಯಗಳು ಜಗತ್ತಿನ ಆರ್ಥಿಕತೆ ಪರಿಚಯಿಸುವಂತಿರಬೇಕು. ಮುಂದಿನ 10 ವರ್ಷಗಳಲ್ಲಿ ಉಂಟಾಗುವ ಜಗತ್ತಿನ ಆರ್ಥಿಕ ಸ್ಥಿತಿಯನ್ನು ವಿದ್ಯಾರ್ಥಿಗಳು ಅರಿಯಬೇಕು.-ಪ್ರೊ.ಸಿ.ಎಂ.ತ್ಯಾಗರಾಜ,
ಆರ್‌ಸಿಯು ಕುಲಪತಿ.