ದೇಶಕ್ಕೆ ಏಕರೀತಿಯ ಭಾಷಾ ನೀತಿ ಅಗತ್ಯ

| Published : Jan 18 2025, 12:49 AM IST

ಸಾರಾಂಶ

ಶಿವಮೊಗ್ಗ: ಕೇಂದ್ರ ಸರ್ಕಾರವು ಭಾರತದಂತಹ ಬೃಹತ್ ರಾಷ್ಟ್ರದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಏಕರೀತಿಯ ಭಾಷಾ ನೀತಿಯನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಶಿವಮೊಗ್ಗ: ಕೇಂದ್ರ ಸರ್ಕಾರವು ಭಾರತದಂತಹ ಬೃಹತ್ ರಾಷ್ಟ್ರದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಏಕರೀತಿಯ ಭಾಷಾ ನೀತಿಯನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸರ್ಕಾರದ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೆರೆಯ ರಾಜ್ಯ ತಮಿಳುನಾಡು ದ್ವಿಭಾಷಾ ಸೂತ್ರವನ್ನು ಅನುಸರಿಸಿದರೆ, ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಿದೆ. ಈ ಭಾಷಾನೀತಿಗಳ ಅನುಷ್ಠಾನದಿಂದಾಗಿ ಆಗಿರುವ ಲಾಭ-ನಷ್ಟಗಳನ್ನು ಪರಿಶೀಲಿಸಿದಾಗ ನಮ್ಮ ರಾಜ್ಯಕ್ಕೆ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ತಿಳಿಸಿದರು.

ಕರ್ನಾಟಕವೂ ಕೂಡ ಕನ್ನಡದ ಭಾಷಾ ಬೆಳವಣಿಗೆ ಮತ್ತು ವಿಕಾಸದ ದೃಷ್ಟಿಯಿಂದ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಅಗತ್ಯವಿದೆ. ಮುಂದಿನ ಒಂದೆರೆಡು ತಿಂಗಳೊಳಗಾಗಿ ರಾಜ್ಯದಲ್ಲಿನ ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಮುಂತಾದ ಕೇಂದ್ರ ಪುರಸ್ಕೃತ ಪಠ್ಯಕ್ರಮಗಳೊಂದಿಗೆ ಪ್ರಾದೇಶಿಕ ಭಾಷೆ ಕನ್ನಡ ಕಲಿಕೆಗೂ ಕೇಂದ್ರದಿಂದಲೇ ಆದೇಶ ಹೊರಡಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರದ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.ಪ್ರಸಕ್ತ ಸಾಲಿನ ಜೂನ್ ಶೈಕ್ಷಣಿಕ ಸಾಲಿನಿಂದಲೇ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಆರಂಭಗೊಳ್ಳಲಿದೆ. ಹೊರ ರಾಜ್ಯದಲ್ಲಿರುವ ಕನ್ನಡ ಪೀಠಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆಡಳಿತಾರೂಢ ರಾಜ್ಯ ಸರ್ಕಾರವು ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿಗೆ 10 ಕೋಟಿ ರು.ಗಳ ಇಡಿಗಂಟನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಹೊರ ರಾಜ್ಯ ಮತ್ತು ದೇಶಗಳಲ್ಲಿ ಕನ್ನಡ ಪೀಠಗಳನ್ನು ತೆರಯಬೇಕು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಬಜೆಟ್‍ನೊಳಗಾಗಿ ಕಾಯ್ದಿರಿಸುವ ವಿಶ್ವಾಸವಿದೆ ಎಂದು ತಿಳಿಸಿದರು.ಅನ್ಯಭಾಷಿಕರು ಸರಳವಾಗಿ ಕನ್ನಡಭಾಷೆ ಕಲಿಯಲು ಅನುಕೂಲವಾಗುವಂತೆ 36 ಗಂಟೆಗಳ ಅವಧಿಯ ಪಠ್ಯಕ್ರಮವನ್ನು ತಯಾರಿಸಲಾಗಿದ್ದು, ಬೆಂಗಳೂರಿನ 30 ಕಲಿಕಾ ಕೇಂದ್ರಗಳಲ್ಲಿ ಸುಮಾರು 600 ಮಲೆಯಾಳಿಗಳು ಹಾಗೂ ಇತರೆ ಪ್ಲಾಟ್‍ಗಳಲ್ಲಿ ವಾಸವಾಗಿರುವ ಅಸಂಖ್ಯಾತ ಜನರಿಗೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಲಿಕಾ ಕೇಂದ್ರಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು. ಸ್ಥಳೀಯ ಜನರು ತಮ್ಮ ಭಾಷೆಯ ಸೊಗಡನ್ನು ಸಂಭ್ರಮಿಸುವಂತೆ ಹಾಗೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಸಹ್ಯಾದ್ರಿ ಉತ್ಸವವನ್ನು ಪುನರ್ ಆರಂಭಗೊಳಿಸಬೇಕು. ಅದಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದ ಅವರು, ಹೊಸದಾಗಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಘಟಕಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕನ್ನಡ ಭಾಷೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಕೇವಲ ಸರ್ಕಾರಿ ಆದೇಶಗಳಿಂದ ಕನ್ನಡದ ಉಳಿವು ಮತ್ತು ವಿಕಾಸ ಸಾಧ್ಯವಿಲ್ಲ. ಕನ್ನಡವನ್ನು ಹೃದಯದ ಭಾಷೆಯಾಗಿ ಪರಿಗಣಿಸಿ, ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಇಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು, ಜನಪ್ರತಿನಿಧಿಗಳು ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನ್ಯಭಾಷಿಕ ನೌಕರರ ನೇಮಕಾತಿಯಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತಿದೆ. ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳೂ ಕೂಡ ಆಂಗ್ಲ ಮತ್ತು ಹಿಂದಿ ಬಾಷೆಯಲ್ಲಿ ನಡೆಯುತ್ತಿರುವುದರಿಂದ ಕನ್ನಡಿಗರು ಬ್ಯಾಂಕುಗಳ ನೇಮಕಾತಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಲು ಪ್ರಾದೇಶಿಕ ನೇಮಕಾತಿ ಪ್ರಾಧಿಕಾರಿಗಳು ಆರಂಭಗೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದರು.ಸ್ಥಳೀಯ ಹೋಟೆಲ್, ಕಟ್ಟಡ ನಿರ್ಮಾಣ ಮುಂತಾದ ಕಡೆಗಳಲ್ಲಿ ಅನ್ಯಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ನೀಡಬೇಕಾದ ಅಗತ್ಯವಿದೆ. ಕೈಗಾರಿಕೆಗಳಲ್ಲಿನ ಸಿ ಮತ್ತು ಡಿ ವೃಂದದ ಹುದ್ದೆಗಳ ನೇಮಕಾತಿಯಲ್ಲೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.ನಗರಗಳಲ್ಲಿ ವಾಣಿಜ್ಯ ವ್ಯವಹಾರ ಕೇಂದ್ರಗಳಲ್ಲಿ ಅಳವಡಿಸಿರುವ ಫಲಕಗಳು ಪೂರ್ಣಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲಿಲ್ಲ. ಶೇ.100ರಷ್ಟು ಈ ಕ್ಷೇತ್ರದ ಸಾಧನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿಗಳಲ್ಲಿನ ಗ್ರಾಮಗಳ ಹೆಸರುಗಳ ಬರವಣಿಗೆಯಲ್ಲೂ ಲೋಪಗಳಿರುವುದನ್ನು ಗುರುತಿಸಲಾಗಿದೆ. ಅವುಗಳನ್ನು ಸಕಾಲದಲ್ಲಿ ಸರಿಪಡಿಸುವ ಕಾರ್ಯ ಇಲ್ಲಿನ ವಾಸಿಗರಿಂದಲೇ ಆಗಬೇಕಾದ ಅಗತ್ಯವಿದೆ ಎಂದರು.ಅನೇಕ ಕ್ಷೇತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿರೀಕ್ಷಿತ ಪ್ರಮಾಣದಲ್ಲಿ ಕನ್ನಡ ಭಾಷೆಯ ಅನುಷ್ಠಾನ ಕಾರ್ಯ ಆಗದಿರುವುದು ವಿಷಾದದ ಸಂಗತಿ. ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ. ಅನ್ಯಭಾಷೆಯ ಕಲಿಕೆಗೆ ವಿರೋಧವಿಲ್ಲ. ಆದರೆ, ಕನ್ನಡ ನಿರ್ಲಕ್ಷ್ಯ ಸಲ್ಲದು-ಸಹಿಸಲಾಗದು ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ಸಂತೋಷ್ ಹಾನಗಲ್, ಡಾ.ರಾಮಚಂದ್ರಪ್ಪ, ಪ್ರಣೀತ್‍ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.