ಸಾರಾಂಶ
ದೇಶವು ಪ್ರಗತಿ ಹೊಂದಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಉತ್ತಮ ಶಿಕ್ಷಣ ಪಡೆಯಬೇಕು. ದೇಶದ ಆಗು-ಹೋಗುಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾ ಮುನ್ನಡೆಯಬೇಕು. ಶಿಕ್ಷಣವಂತರಾದರೆ ವಿಮರ್ಶಾತ್ಮಕ ಭಾವನೆಗಳು, ವೈಚಾರಿಕ ಚಿಂತನೆಗಳು ಮೂಡಲಿವೆ. ಅಂತಹ ಉತ್ತಮವಾದ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಸಹಾಯಕ ವಾಗಿರಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ದೇಶವು ಪ್ರಗತಿ ಹೊಂದಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಉತ್ತಮ ಶಿಕ್ಷಣ ಪಡೆಯಬೇಕು. ದೇಶದ ಆಗು-ಹೋಗುಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾ ಮುನ್ನಡೆಯಬೇಕು. ಶಿಕ್ಷಣವಂತರಾದರೆ ವಿಮರ್ಶಾತ್ಮಕ ಭಾವನೆಗಳು, ವೈಚಾರಿಕ ಚಿಂತನೆಗಳು ಮೂಡಲಿವೆ. ಅಂತಹ ಉತ್ತಮವಾದ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಸಹಾಯಕ ವಾಗಿರಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಶುಕ್ರವಾರ ತಾಲೂಕಿನ ಮರಡಿ ಗ್ರಾಮದಲ್ಲಿ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದ ದೇವರ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯದ ಉದ್ಘಾಟನೆ, ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓದು ಎನ್ನುವುದು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವಂತಹ ದೊಡ್ಡ ಶಕ್ತಿಯಾಗಿದೆ. ಪುಸ್ತಕ ಎನ್ನುವುದು ನಮ್ಮ ಸ್ನೇಹಿತನಾಗಿರಬೇಕು ಎಂದರು.ಸಮಾರಂಭ ದಿವ್ಯ ಸಾನ್ನಿಧ್ಯ ವಹಿಸಿ, ದೇವತಾ ಕಾರ್ಯಕ್ರಮಗಳ ನೆರವೇರಿಸಿದ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರಮುನಿ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬ ಮಾನವಜೀವಿಯೂ ಆಂತರಿಕವಾಗಿ ಶ್ರೀಮಂತನಾಗಿರಬೇಕು. ನಿತ್ಯ ದುಡಿ, ಸತ್ಯನುಡಿ, ಸುಖಪಡಿ ಎನ್ನುವುದು ಮನುಷ್ಯರ ಬದ್ಧತೆಯ ಜೀವನವಾಗಬೇಕು. ಬೌದ್ಧಿಕವಾಗಿ ಶ್ರೀ ಮಂತನಾದರೆ ಆಧ್ಯಾತ್ಮಿಕ ಹಾಗೂ ಆತ್ಮ ವಿವೇಚನೆಯ ಶಕ್ತಿಯ ಸ್ವರೂಪನಾಗುತ್ತಾನೆ ಎಂದು ಶ್ರೀಗಳು ಹೇಳಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪ್ರಕಾಶ್, ಪ್ರಮುಖರಾದ ಪವನ್ ಕುಮಾರ್, ರೇಣುಕಮ್ಮ, ಸಮಿತ, ಮೂತ್ಯಪ್ಪ, ಮಹಾಂತಪ್ಪ, ಸಿದ್ದಪ್ಪ, ಜಯಕುಮಾರ್, ನಾಗಭೂಷಣ್, ರಮೇಶ್, ಗ್ರಾಮಸ್ಥರು ಹಾಜರಿದ್ದರು.- - -
-9ಕೆಸಿಎನ್‌ಜಿ2.ಜೆಪಿಜಿ:ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು.