ಸಾರಾಂಶ
ಮುಂಡಗೋಡ: ಮುಖ್ಯಸ್ಥರನ್ನು ಪ್ರಜೆಗಳೇ ಆಯ್ಕೆ ಮಾಡುವ ವ್ಯವಸ್ಥೆಯೇ ಗಣರಾಜ್ಯ ಎಂದು ತಹಸೀಲ್ದಾರ್ ಶಂಕರ ಗೌಡಿ ತಿಳಿಸಿದರು.ಭಾನುವಾರ ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ೭೬ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತನ್ನದೇ ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಪದ್ಧತಿಯಲ್ಲಿ ಸಾಗಿಬಂದ ನಮ್ಮ ದೇಶವು ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡಿದ್ದು, ಅವುಗಳ ರಕ್ಷಣೆಗೆ ಮಾರ್ಗಗಳನ್ನು ಕೊಟ್ಟಿದೆ ಎಂದರು.
ಜಾತಿ, ಭಾಷೆ, ಪ್ರದೇಶ, ಲಿಂಗ ಇವೆಲ್ಲವನ್ನು ಮೀರಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ. ಹಕ್ಕುಗಳನ್ನು ಅನುಭವಿಸುವ ಕರ್ತವ್ಯಗಳ ಕಡೆಗೂ ಗಮನ ನೀಡುವ ಅವಶ್ಯಕತೆ ಇದೆ. ಸಾಕಷ್ಟು ಸಮಸ್ಯೆಗಳ ನಡುವೆಯೂ ದೇಶವು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದೆನಿಸಿಕೊಂಡಿದ್ದು, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಗತ್ತಿನ ಮುಂಚೂಣಿ ದೇಶಗಳಲ್ಲಿ ಒಂದಾಗಿದೆ ಎಂದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಜಯಸುಧಾ ಬಸವರಾಜ ಬೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಸಿಪಿಐ ರಂಗನಾಥ ನೀಲಮ್ಮನವರ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಗಣೇಶ ಗಬ್ಬೂರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ ಹೆಗಡೆ, ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ರಮೇಶ ಅಂಬಿಗೇರ, ತಾಪಂ ಮಾಜಿ ಸದಸ್ಯ ಜ್ಞಾನದೇವ ಗುಡಿಯಾಳ ಪಪಂ ಸದಸ್ಯರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಬಿಜೆಪಿ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ
ಕಾರವಾರ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವ ಭಾರತದ ಕಡೆಗೆ ನೋಡುವ ಹಾಗೆ ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಲು ನಿರಂತರ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ತಿಳಿಸಿದರು.ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದರು.ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ಮಹಾಕುಂಭ ಮೇಳ ಆರಂಭವಾಗಿದೆ. ದೇಶ, ವಿದೇಶಗಳ ಜನರು ಬಂದು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇಡಿ ಜಗತ್ತು ಭಾರತದತ್ತ ನೋಡುತ್ತಿದೆ ಎಂದರು.ಕೊಡಿಬಾಗ ಸೇತುವೆ ಕುಸಿದ ನಂತರ ಉಂಟಾಗಬಹುದಾದ ದುರಂತವನ್ನು ತಪ್ಪಿಸಿದ್ದಕ್ಕಾಗಿ ಸೂರಜ ಸಾರಂಗ ಹಾಗೂ ಕರಣ ನಾವಗೆ ಅವರನ್ನು ಸನ್ಮಾನಿಸಲಾಯಿತು.ನಗರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ ಸ್ವಾಗತಿಸಿದರು. ಗ್ರಾಮೀಣ ಅಧ್ಯಕ್ಷ ಸುಭಾಷ ಗುನಗಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ ಮತ್ತಿತರರು ಇದ್ದರು.