ಹಳ್ಳಿಯ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ

| Published : Apr 25 2025, 12:33 AM IST

ಸಾರಾಂಶ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಪವಾರ ಅಭಿಮತ । ಕಲಬುರಗಿಯಲ್ಲಿ ರಾಷ್ಟ್ರೀಯ ಪಂಚಾಯತರಾಜ್ ದಿವಸ ಆಚರಣೆ

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಷ್ಟ್ರಪಿತಾ ಮಹಾತ್ಮ ಗಾಂಧಿಜೀ ಅವರು ನುಡಿದ ‘ಭಾರತದ ಆತ್ಮವು ಹಳ್ಳಿಯಲ್ಲಿ ವಾಸವಾಗಿದೆ’ ಎಂಬ ವಿಚಾರಧಾರೆಯನ್ನು ನೆನೆದು ಹಳ್ಳಿ ಮಟ್ಟದಲ್ಲಿ ಕಲ್ಯಾಣಾಭಿವೃದ್ಧಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನವಾದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಪವಾರ ಅಭಿಪ್ರಾಯಪಟ್ಟರು.

ಕಲಬುರಗಿ ಜಿಪಂ ಸಭಾಂಗಣದಲ್ಲಿ ಜಿಪಂ ಕಲಬುರಗಿ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಪಂಚಾಯತರಾಜ್ ದಿವಸ ಆಚರಣೆಯನ್ನು ಸಸಿಗೆ ನೀರು ಎರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಿಪಂ ಸಿಇಒ ಭಂವರ ಸಿಂಗ್ ಮೀನಾ ಮಾತನಾಡಿ, ಪಂಚಾಯತ್ ರಾಜ್ ಕಾಯ್ದೆ ಅನುಸಾರ ರಚನೆಯಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ, ಸಾಮಾನ್ಯ ಸಭೆಗಳ ಮೂಲಕ ಸ್ಥಳಿಯವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯ 11 ತಾಲೂಕು ಪಂಚಾಯತಿಯ 261 ಗ್ರಾಮ ಪಂಚಾಯತಿಗಳ 2024-25ನೇ ಸಾಲಿನಲ್ಲಿ ಒಟ್ಟು 25 ಕೋಟಿ ರು. ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಉತ್ತಮ ರೀತಿಯಲ್ಲಿ ತೆರಿಗೆ ವಸೂಲಾತಿಯಾಗಿದ್ದು, ಕಳೆದ 5 ವರ್ಷಗಳ ತೆರಿಗೆ ವಸೂಲಾತಿ ಸಾಧನೆಯನ್ನು ಪರಿಗಣಿಸಿದಾಗ ಈ ವರ್ಷದ ತೆರಿಗೆ ವಸೂಲಾತಿಯು ಉತ್ತಮವಾಗಿದೆ ಎಂದು ಹೇಳಿದರು.

ಅದರಂತೆ ಗ್ರಾಪಂಗಳಲ್ಲಿ ಎಲ್ಲಾ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಜರಾತಿ, ವೇತನ ಮತ್ತು ಗ್ರಾಮ ಸಭೆ, ಮಕ್ಕಳ ಸಭೆ ಹಾಗೂ ಮಹಿಳಾ ಸಭೆಗಳನ್ನು ಡಿಜಿಟಲಿಕರಣದಿಂದ ಪಂಚತಂತ್ರ 2.0 ರಡಿಯಲ್ಲಿ ಅಳವಡಿಸಲಾಗುತ್ತಿದೆ. ಮಕ್ಕಳ ಓದು ಬರಹ ವಿಕಾಸಕ್ಕಾಗಿ ಸೂಸಜ್ಜಿತ ಡಿಜಿಟಲ್ ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ನರೇಗಾ ಯೋಜನೆಯಡಿ ಸುಸಜ್ಜಿತ ಕೂಸಿನ ಮನೆ ನಿರ್ಮಿಸಿರುವುದರಿಂದ ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಯಲ್ಲಿ ಅನಕೂಲವಾಗಿದೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಕಟ್ಟಕಡೆಯ ಜನ ಸಾಮಾನ್ಯರಿಗೂ ಕೂಡಾ ತಲುಪಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಲೋಕತಂತ್ರ ವ್ಯವಸ್ಥೆ ಹಾಗೂ ಸ್ಥಳಿಯ ಆಡಳಿತ ಸದೃಢ ಮಾಡಲು ಕೈಜೊಡಿಸಲು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗಿತ್ತು.

ಕರ ವಸೂಲಿಯಲ್ಲಿ ಅತಿ ಹೆಚ್ಚು ಕರ ಸಂಗ್ರಹ ಮಾಡಿರುವ ಸೇಡಂ ತಾಲೂಕಿನ ಊಡಗಿ ಗ್ರಾಮ ಪಂಚಾಯಿತಿ, ಆಳಂದ ತಾಲೂಕಿನ ಮೋಘಾ(ಕೆ), ಅಫಜಲಪೂರ ತಾಲೂಕಿನ ಗೌರ ಬಿ ಗ್ರಾಪಂ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗೌರವಿಸಲಾಯಿತು.

ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಪಂ, ಚಿತ್ತಾಪೂರ ತಾಲೂಕಿನ ಲಾಡ್ಲಾಪೂರ ಗ್ರಾಪಂ ಮತ್ತು ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರ ಗ್ರಾಪಂ ಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗೌರವಿಸಲಾಯಿತು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಸಿನ ಮನೆ ಯೋಜನೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುವ ಕಮಲಾಪೂರ ತಾಲೂಕಿನ ಜೀವಣಗಿ ಗ್ರಾಪಂ, ಅಫಜಲಪೂರ ತಾಲೂಕಿನ ಅಳ್ಳಗಿ ಗ್ರಾಪಂ ಮತ್ತು ಚಿತ್ತಾಪೂರ ತಾಲೂಕಿನ ಲಾಡ್ಲಾಪೂರ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಗ್ರಾಮ ಪಂಚಾಯತಗಳಲ್ಲಿ ಪಂಚತಂತ್ರ ಮೂಲಕ ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಫಜಲಪೂರ ತಾಲೂಕಿನ ಕರಜಗಿ ಮತ್ತು ಅಳ್ಳಗಿ ಗ್ರಾಪಂ, ಆಳಂದ ತಾಲೂಕಿನ ಭೋದನ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಗೌರವಿಸಲಾಯಿತು.

ಗ್ರಾಪಂಗಳಲ್ಲಿ ಕಳೆದ ವರ್ಷ ನಿಗದಿತ ಸಮಯ ಹಾಗೂ ನಿಮಾನುಸಾರವಾಗಿ ಸಾಮಾನ್ಯ ಸಭೆಗಳನ್ನು ಮಾಡಿರುವ ಅಳ್ಳಗಿ, ಕಲ್ಲೂರ, ಹಾಳ ತಡಕಲ್, ಭೀಮಳ್ಳಿ ಗ್ರಾಪಂಗಳ ಅಧ್ಯಕ್ಷರು ಮತ್ತು ಪಿಡಿಒ ಗಳಿಗೆ ಮತ್ತು ನಿಗದಿತ ಗ್ರಾಮ ಸಭೆಗಳ ಮೂಲಕ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಸರಡಗಿ ಬಿ, ಇಟಕಲ್, ಕಡಗಂಚಿ, ಪಟ್ಟಣ, ದಣ್ಣೂರ ಮತ್ತು ನಿಂಬರ್ಗಾ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಗಳಿಗೆ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಕುಮಾರ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಆವಿನಾಶ ಶಿಂಧೆ, ಜಿಪಂ ಡಿಆರ್‌ಡಿಎ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಮತ್ತು ಜಿಪಂ ಶಾಖಾ ಮುಖ್ಯಸ್ಥರು, ಅಧಿಕಾರಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಲಬುರಗಿ ಜಿಪಂ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಸ್ವಾಗತಿಸಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿಕಾಸ್ ಸಜ್ಜನ್ ವಂದಿಸಿದರು.