ದೊಡ್ಡಬಳ್ಳಾಪುರ: ಭಾರತದ ಸ್ವಾತಂತ್ರ್ಯ ಹಲವು ತ್ಯಾಗ-ಬಲಿದಾನಗಳ ಮಹಾ ಅಧ್ಯಾಯವಾಗಿದ್ದು, ದೊರೆತಿರುವ ಸ್ವಾತಂತ್ರ್ಯವನ್ನು ಪ್ರಜ್ಞಾವಂತಿಕೆಯಿಂದ ಕಾಪಾಡಿಕೊಳ್ಳುವುದು ಅಗತ್ಯ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು

ದೊಡ್ಡಬಳ್ಳಾಪುರ: ಭಾರತದ ಸ್ವಾತಂತ್ರ್ಯ ಹಲವು ತ್ಯಾಗ-ಬಲಿದಾನಗಳ ಮಹಾ ಅಧ್ಯಾಯವಾಗಿದ್ದು, ದೊರೆತಿರುವ ಸ್ವಾತಂತ್ರ್ಯವನ್ನು ಪ್ರಜ್ಞಾವಂತಿಕೆಯಿಂದ ಕಾಪಾಡಿಕೊಳ್ಳುವುದು ಅಗತ್ಯ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ಇಲ್ಲಿನ ದೊಡ್ಡಬಳ್ಳಾಪುರ ಉಪವಿಭಾಗ ಮತ್ತು ತಾಲೂಕು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಭಗತ್‌ ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ 80 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿಅವರು ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ದೇಶ ಇಂದು ಹಲವು ವಲಯಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿ ಮುನ್ನಡೆಯುತ್ತಿದೆ. ಸಾಮಾಜಿಕ, ಕೈಗಾರಿಕಾ, ಆರ್ಥಿಕ ವಲಯಗಳೂ ಸೇರಿದಂತೆ ಪ್ರಗತಿಯ ಹೊಸ ವೇಗಕ್ಕೆ ಸಾಕ್ಷಿಯಾಗಿದೆ. ಸ್ವಚ್ಛ ಮತ್ತು ಪಾರದರ್ಶಕ ನೀತಿಗಳಿಂದ ದೇಶದ ಮುನ್ನಡೆ ಅನನ್ಯ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ ಟಿ.ಆರ್.ಮಂಜುನಾಥ್ ಮಾತನಾಡಿ, ಎಸ್‌ಐಆರ್‌ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿದ್ದು, ಎಲ್ಲ ಸಾರ್ವಜನಿಕರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ನಾವು ಪ್ರಜಾತಂತ್ರಕ್ಕೆ ನೀಡುವ ಗೌರವವಾಗಿದೆ. ಮತದಾನ ಪ್ರತಿಯೊಬ್ಬ ನಾಗರೀಕನ ಹಕ್ಕು. ಯಾವುದೇ ಅರ್ಹ ಮತದಾರ ಆ ಹಕ್ಕಿನಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ತಮ್ಮ ಹೊಣೆಯಾಧಾರಿಕ ಕರ್ತವ್ಯ ನಿರ್ವಹಿಸಬೇಕು ಎಂದರು.

ಸ್ವಾತಂತ್ರ್ಯದ ಬಳಿಕ, ದೇಶ ಹಲವು ಮಹತ್ವದ ವಲಯಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದೆ. ಶೈಕ್ಷಣಿಕ ಚಿಂತನೆಗಳು ಸಾಕಾರಗೊಳ್ಳಬೇಕು. ದೇಶವನ್ನು ದಾಸ್ಯದಿಂದ ಬಿಡಿಸಿದ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಯ ಕಥಾನಕವೂ ಆದರ್ಶವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಗಮನ ಸೆಳೆದ ಪೆರೇಡ್‌:

80ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಆಕರ್ಷಕ ಪೆರೇಡ್‌ ನಡೆಯಿತು. ಗಣ್ಯರು ತೆರೆದ ವಾಹನದಲ್ಲಿ ಪೆರೇಡ್‌ ವೀಕ್ಷಣೆ ನಡೆಸಿದರು. ಬಳಿಕ, ಪೊಲೀಸ್‌ ಪಡೆ, ಎನ್‌ಸಿಸಿ, ಭಾರತ ಸೇವಾದಳ, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ಪಥ ಸಂಚಲನ ನಡೆಯಿತು. ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗಿಯಾದರು.

ಸಾಧಕರಿಗೆ ಸನ್ಮಾನ:

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಸ್ವಾತಂತ್ರ್ಯ ದಿನದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ:

ವೇದಿಕೆ ಕಾರ್ಯಕ್ರಮದ ಬಳಿಕ, ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ದೇಶಭಕ್ತಿಯ ಸಂದೇಶವನ್ನು ಸಾರುವ ವಿವಿಧ ಸಾಂಸ್ಕೃತಿಕ ನೃತ್ಯ, ರೂಪಕ, ಸಾಮೂಹಿಕ ನೃತ್ಯ ಪ್ರದರ್ಶನಗಳು ನಡೆದವು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಪ್ರಭಾ ನಾಗರಾಜ್, ತಹಶೀಲ್ದಾರ್‌ ಮಲ್ಲಪ್ಪ, ಪೌರಾಯುಕ್ತ ಕಾರ್ತಿಕೇಶ್ವರ, ಡಿವೈಎಸ್‌ಪಿ ಪಾಂಡುರಂಗ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

15ಕೆಡಿಬಿಪಿ1-

ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೆರೇಡ್‌ನಲ್ಲಿ ಪಥ ಸಂಚಲನ ಗಮನ ಸೆಳೆಯಿತು.

15ಕೆಡಿಬಿಪಿ2-

ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರನ್ನು ಸನ್ಮಾನಿಸಲಾಯಿತು.

15ಕೆಡಿಬಿಪಿ3- ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೆರೇಡ್‌ನಲ್ಲಿ ರಾಷ್ಟ್ರಭಕ್ತಿ ಸಾರುವ ಸಾಂಸ್ಕೃತಿಕ ರೂಪಕಗಳು ಪ್ರದರ್ಶನಗೊಂಡವು.

15ಕೆಡಿಬಿಪಿ4- ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೆರೇಡ್‌ ಅನ್ನು ಶಾಸಕ ಧೀರಜ್‌ ಮುನಿರಾಜ್, ಉಪವಿಭಾಗಾಧಿಕಾರಿ ಮಂಜುನಾಥ್‌ ವೀಕ್ಷಣೆ ನಡೆಸಿದರು.