ಸಾರಾಂಶ
- ಯುವ, ಮಹಿಳಾ ನಾಯಕತ್ವ ಶಿಬಿರ, ಮಾಹಿತಿ ಕಾರ್ಯಾಗಾರ ಉದ್ಘಾಟನೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರಸ್ತುತ ಜಾತಿ, ಧರ್ಮ, ವರ್ಗ, ಲಿಂಗಬೇಧವನ್ನು ಮೀರಿ, ವಿಶಾಲ ತಳಹದಿಯ ಮೇಲೆ ಮಹಿಳಾ ನಾಯಕತ್ವದಲ್ಲಿ ದೇಶವನ್ನು ಕಟ್ಟುವ ಅಗತ್ಯವಿದೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಲ್. ಅರುಣಕುಮಾರ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಯುವ ಮತ್ತು ಮಹಿಳಾ ನಾಯಕತ್ವ ಶಿಬಿರ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನ ಮಹಿಳೆಯರೆಲ್ಲರಿಗೂ ಸಮಾನತೆ, ಸಮಾನ ಅವಕಾಶ ಮತ್ತು ಸವಲತ್ತು ಹೊಂದುವ ಅವಕಾಶ ಕಲ್ಪಿಸಿದೆ ಎಂದರು.
ಮಹಿಳೆಯರು ಸ್ಥಳೀಯ ಚಳವಳಿಗಳ ಮುಖಾಂತರ ನಾಯಕಿಯರಾಗಿ ಮುಂದೆ ಬಂದಿದ್ದಾರೆ. ಅದೇ ನಿಟ್ಟಿನಲ್ಲಿ ಮಹಿಳೆಯರು ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಬೇಕಾಗಿದೆ. ಇದಕ್ಕಾಗಿ ಮಹಿಳೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಮಹಿಳೆಯರೇ ಸ್ವಯಂ ನಿರ್ಧಾರ ಕೈಗೊಳ್ಳುವಂತಹ ಅವಕಾಶ ಮಾಡಿಕೊಡಬೇಕಿದೆ. ಮಹಿಳೆಯರು ಸಮಾಜದ ಎಲ್ಲ ಸಮುದಾಯಗಳಲ್ಲಿ ಭಾಗವಹಿಸುವ ವಾತಾವರಣ ನಿರ್ಮಾಣವಾಗಬೇಕಿದೆ. ಅದು ನಮ್ಮೆಲ್ಲದ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.75 ವರ್ಷದಿಂದಲೂ ಪುರುಷರಿಗೆ ಸಮಾನ ಕೆಲಸ ಮಾಡುತ್ತಿರುವ ಮಹಿಳೆಯರು ಇಂದಿಗೂ ದಬ್ಬಾಳಿಕೆ, ದೌರ್ಜನ್ಯ ಎದುರಿಸುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರನ್ನು ಬದಿಗಿಟ್ಟು ಪುರುಷ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತಿದೆ. ಇಂದಿರಾ ಗಾಂಧಿ ಪ್ರಧಾನಿಯಾದರು. ಇತರೆ ಮಹಿಳೆಯರು ರಾಷ್ಟ್ರಪತಿಗಳಾದರೂ ದೇಶದ ಮಹಿಳೆಯರ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಅನೇಕ ಅವಕಾಶದಿಂದ ತಾಯಂದಿರು ವಂಚಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣ ಮತ್ತು ಅವರ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ ಎಂದರು.
ಜನಾಂದೋಲನ ಸಮಿತಿ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಕೊಳಚೆ ಪ್ರದೇಶಗಳು ಶ್ರಮಜೀವಿಗಳ ತಾಣಗಳಾಗಿವೆ. ಈ ಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಮೂಲ ಆಶಯ ಗೊತ್ತಾಗಬೇಕಿದೆ. ಆದರೆ ಸಂವಿಧಾನ ಮಾಡಬೇಕಾದ ಕೆಲಸಗಳನ್ನು ಬೇರೆ ಬೇರೆ ಹಿತಾಸಕ್ತಿಗಳು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆರ್ಥಿಕ ಸುಸ್ಥಿರತೆ ಬೇಕಾದರೆ ಮಹಿಳೆಯರಿಗೆ ನಾಯಕತ್ವ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ರೀತಿ ಕಾರ್ಯಾಗಾರಗಳು ಸಹಕಾರಿ ಎಂದರು.ಜಿಲ್ಲಾ ಕಾರ್ಮಿಕಾಧಿಕಾರಿ ಇಬ್ರಾಹಿಂ ಮಾತನಾಡಿ, ಕಾರ್ಮಿಕರ ಪರ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಲಕಾಲಕ್ಕೆ ಸರಿಯಾಗಿ ಸಂಘಟಿತ ವಲಯದಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಇದೇ ವೇಳೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಓದಿಸಲಾಯಿತು.ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಮುಖಂಡರಾದ ರಂಗಮ್ಮ, ಸ್ಲಂ ಜನಾಂದೋಲನಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಸ್ಲಂ ಜನಾಂದೋಲನ ಕರ್ನಾಟಕದ ಅಧ್ಯಕ್ಷ ಎಂ.ಶಬ್ಬೀರ್ ಸಾಬ್, ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷೆ ಮಂಜುಳಾ, ಜಂಷಿದಾ ಬಾನು, ಬಾಲಪ್ಪ, ರೇಷ್ಮಾ, ರೇಖಾ, ಅಸ್ಮಾ, ರಾಜೇಶ್ವರಿ, ಬೀಬೀ ಜಾನ್, ಗೀತಮ್ಮ, ಚಮನ್, ಸಲಾಂ ಸಾಬ್, ಆರಿಫ್, ಪರ್ವೀನ್ ಬಾನು, ರಜಿಯಾ ಬೀ, ನೂರ್ ಜಹಾನ್, ಪವಿತ್ರ, ಸಿಕಂದರ್, ಯೂಸೂಫ್ ಸಾಬ್, ಮಹಬೂಬ್ ಸಾಬ್, ಡಿ.ಕೆ.ನಯಾಜ್ ಪದಾಧಿಕಾರಿಗಳು ಇದ್ದರು.
- - - -18ಕೆಡಿವಿಜಿ14:ಯುವ, ಮಹಿಳಾ ನಾಯಕತ್ವ ಶಿಬಿರ. ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಹಕ್ಕುಪತ್ರ ವಿತರಿಸಲಾಯಿತು.